ಕಲಬುರಗಿ: ಗಮನಿಸಿ..ಮಿನರಲ್‌ ವಾಟರ್ ಬಾಟಲ್‌‌ ಕುಡಿಯುವ ಮುನ್ನ ಹುಷಾರ್‌, ಲಾಕ್‌ಡೌನ್‌ ಎಫೆಕ್ಟ್‌ನಿಂದ ಡೇಟ್‌ ಬಾರ್‌!

ಚಂದ್ರು ಹಿರೇಮಠ ಕಲಬುರಗಿ-
ಕಲಬುರಗಿ: ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಟಾಕ್‌ ಇದ್ದ ಅವಧಿ ಮೀರಿದ ಮಿನರಲ್‌ ವಾಟರ್‌ ಬಾಟಟ್‌ಗಳನ್ನು ಮಾರಾಟ ಮಾಡುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಪ್ಪಿತಪ್ಪಿ ಈ ಮಿನರಲ್‌ ನೀರು ಕುಡಿದರೆ ಆರೋಗ್ಯದಲ್ಲಿ ಏರುಪೇರು ಖಚಿತ.

ಈ ವಾಟರ್‌ ಬಾಟಲಿಗಳನ್ನು ಖರೀದಿಸಿದ ಜನರು ಅವಧಿ ಮೀರಿದ ಕಾರಣಕ್ಕೆ ಮರಳಿಸಿರುವ ಘಟನೆಗಳೂ ನಡೆದಿವೆ. ನಗರದ ಹೆಚ್ಚಿನ ಮಳಿಗೆ, ಹೋಟೆಲ್‌ಗಳಲ್ಲಿಅವಧಿ ಮೀರಿದ ಮಿನರಲ್‌ ನೀರಿನ ಬಾಟಲ್‌ಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ. ಬಾಟಲಿಗಳು ಅವಧಿ ಮೀರಿರುವ ವಿಷಯ ಮಳಿಗೆ ಮಾಲೀಕರಿಗೆ ಗೊತ್ತಿದೆ. ಹೀಗಿದ್ದೂ ಯಾವುದೇ ಹಿಂಜರಿಕೆಯಿಲ್ಲದೆ ಅವರು ಮಾರಾಟ ಮಾಡುತ್ತಿದ್ದಾರೆ. ಅವಧಿ ಮೀರಿದೆಯಲ್ಲಎಂದು ಪ್ರಶ್ನಿಸಿದರೆ ನಮಗೂ ಗೊತ್ತಿರಲಿಲ್ಲ. ಇವುಗಳನ್ನು ತೆಗೆಸಲಾಗುವುದು ಎಂದು ಹೇಳುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಲಾಕ್‌ಡೌನ್‌ ವೇಳೆ ಮಾರಾಟ ಆಗಿರಲಿಲ್ಲ!
ಬೇಸಿಗೆ ಆರಂಭಕ್ಕೂ ಮುನ್ನ ಬಹುತೇಕ ಮಳಿಗೆಯವರು ಹೆಚ್ಚಿನ ಪ್ರಮಾಣದಲ್ಲಿ 1ಲೀ, 2ಲೀ, 5ಲೀ ಮತ್ತು ಅರ್ಧ ಲೀಟರ್‌ ಮಿನರಲ್‌ ವಾಟರ್‌ ಬಾಟಲಿಗಳನ್ನು ತರಿಸಿಕೊಂಡು ದಾಸ್ತಾನು ಮಾಡಿಕೊಂಡಿದ್ದರು. ಆದರೆ, ಮಾರ್ಚ್ ಅಂತ್ಯಕ್ಕೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಅವು ಬಿಕರಿ ಆಗಿರಲಿಲ್ಲ. ಈಗ ಅವುಗಳ ಅವಧಿ ಮುಗಿದಿದೆ. ವಿಷಯ ಗೊತ್ತಿದ್ದರೂ ಸಹ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹಾಗೆಯೇ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ವಿವಿಧ ಮಳಿಗೆಗಳಷ್ಟೇ ಅಲ್ಲ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಯಾವುದೇ ಅಳುಕು ಇಲ್ಲದೆ ಅವಧಿ ಮೀರಿದ ಬಾಟಲಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಮತ್ತು ಡಿಎಚ್‌ಒ ಕಚೇರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ತಲೆ ಕೆಡಿಸಿಕೊಂಡಿಲ್ಲ.

ಆದರೆ, ಹಣ ಗಳಿಸುವುದಕ್ಕಾಗಿ ಬೇರೆಯವರ ಪ್ರಾಣಕ್ಕೆ ಸಂಚಕಾರ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎನ್ನುತ್ತಾರೆ ಸಾರ್ವಜನಿಕರಾದ ಸಂಗಮೇಶ ಹಾಗೂ ಮಂಜುನಾಥ. ಆರೋಗ್ಯ ಇಲಾಖೆಯವರು ತಡಮಾಡದೆ ವಿವಿಧ ಮಳಿಗೆ, ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಪ್ಪು ಎಸಗಿದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲೇಬೇಕಾದ ಕೆಲಸ ಎಂದು ಸ್ಥಳೀಯರಾದ ದೇವರಾಜ್‌ ಮನವಿ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *