ಮಹಾರಾಷ್ಟ್ರ ಡಿಸಿಎಂಗೆ ‘ಖಡಕ್ ಎಚ್ಚರಿಕೆ’ ನೀಡಿದ ಸಿಎಂ ಬಿಎಸ್‍ವೈ!
ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮಹಾಜನ್ ಆಯೋಗ ವರದಿಯೇ ಅಂತಿಮ ಎಂದು ಸಿಎಂ ಯಡಿಯೂರಪ್ಪ(B.S.Yediyurappa) ಅವರು ಪುನರುಚ್ಚರಿಸಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ ಗಡಿಭಾಗದ ಪ್ರದೇಶಗಳು ನಮ್ಮ ರಾಜ್ಯಕ್ಕೆ ಸೇರ್ಪಡೆಯಾಗಬೇಕೆಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ- ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮುಗಿದು ದಶಕಗಳವೇ ಕಳೆದಿವೆ. ಬೆಳಗಾವಿ ಎಂದೆಂದೂ ರಾಜ್ಯದ ಅವಿಭಾಜ್ಯ ಅಂಗ. ಮಹಾಜನ್ ವರದಿಯೇ ಅಂತಿಮ ಎಂಬುದು ಜಗತ್ತಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಅಜಿತ್ ಪವಾರ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಜನರನ್ನು ಪ್ರಚೋದನೆಗೊಳಿಸುವ ದುರದ್ದೇಶಪೂರ್ವದಿಂದಲೇ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದ ಒಂದೇ ಒಂದು ಇಂಚು ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನೀವು ಪದೇ ಪದೇ ಗಡಿ ವಿವಾದ ತೆಗೆದರೆ ನಾವು ಮಹಾಜನ್ ಆಯೋಗದ ವರದಿಯನ್ನು ಜಗತ್ತಿಗೇ ತಿಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.