ಜಿಲ್ಲೆಯ ಜನರ ಅಭಿಮಾನದ ಋಣ ದೊಡ್ಡದ್ದು; ಕಾಫಿನಾಡಿಗರಿಗೆ ಸಚಿವ ಸಿ.ಟಿ. ರವಿ ಭಾವನಾತ್ಮಕ ಪತ್ರ
ನಿಮ್ಮಗಳ ಋಣ ನನ್ನ ಮೇಲಿದೆ. ಮುಂದಿನ ದಿನಗಳಲ್ಲೂ ನಿಮ್ಮ ಸೇವೆಗೆ ನಿಮ್ಮ ಮನೆಮಗನಂತೆ ನಾನು ದುಡಿಯುತ್ತೇನೆಂದು ಪತ್ರದ ಮೂಲಕ ಜಿಲ್ಲೆಯ ಜನರನ್ನು ಸಚಿವ ಸಿಟಿ ರವಿ ಸ್ಮರಿಸಿದ್ದಾರೆ.
ಚಿಕ್ಕಮಗಳೂರು: ನಿಮ್ಮಗಳ ಪ್ರೀತಿಗೆ ನಾನು ಋಣಿ, ಮಗನಂತೆ ಪೋಷಿಸಿದ ಚಿಕ್ಕಮಗಳೂರು ಜಿಲ್ಲೆಯ ಜನರ ಅಭಿಮಾನದ ಋಣ ದೊಡ್ಡದ್ದು, ಕೈತುತ್ತು ನೀಡಿ, ಜೇಬಿಗೆ ಹಣವಿಟ್ಟವರಿಗೆ ನಾನು ಋಣಿಯಾಗಿದ್ದೇನೆ ಎಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನ ಕಚೇರಿ ಆರಂಭಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಜಿಲ್ಲೆಯ ಜನರಿಗೆ ಭಾವನಾತ್ಮಕ ಪತ್ರ ಬರೆದು ಹಳ್ಳಿಯಿಂದ ದಿಲ್ಲಿವರೆಗಿನ ನಡೆಯಲ್ಲಿನ ನೆನೆಪಿನ ಬುತ್ತಿಯನ್ನ ಮೆಲುಕು ಹಾಕಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಬೆಳೆದ ಸಿ.ಟಿ.ರವಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ಇಂದು ತಮ್ಮ ಕಚೇರಿ ತೆರೆದಿದ್ದಾರೆ.
ಈ ವೇಳೆ, 1988ರಲ್ಲಿ ಬಿಜೆಪಿ ಸದಸ್ಯನಾಗಲು ಆಹ್ವಾನಿಸಿದ ಆಟೋ ಚಂದ್ರಣ್ಣನಿಂದ ಹಿಡಿದು ಪ್ರಚಾರ ಮುಗಿಸಿ ಖಾಲಿ ಹೊಟ್ಟೆಯಲ್ಲಿ ಬಂದಾಗ ಕೈತುತ್ತು ನೀಡಿದ ಅನ್ನದಾತರಿಂದ ಹೋರಾಟ ಆರಂಭಿಸಿದಾಗ ಖಾಲಿ ಜೇಬಿಗೆ ಹಣವಿಟ್ಟು, ರಾಜಕೀಯ ತಪ್ಪು-ಒಪ್ಪುಗಳನ್ನ ತಿದ್ದಿ ತೀಡಿದ ಅದೆಷ್ಟೋ ಚಂದ್ರಣ್ಣರಿಂದ ನಾನು ಇಂದು ಹಳ್ಳಿಯಿಂದ ದಿಲ್ಲಿಗೆ ಬಂದು ನಿಂತಿದ್ದೇನೆ.

ಅಂತಹಾ ಅನೇಕ ಚಂದ್ರಣ್ಣರಿಗೆ ಹಾಗೂ ಜಿಲ್ಲೆಯ ಜನರಿಗೆ ನಾನು ಋಣಿ ಎಂದು ಭಾವನಾತ್ಮಕ ಪತ್ರ ಬರೆದು ಜಿಲ್ಲೆಯ ಜನರನ್ನ ಸ್ಮರಿಸಿದ್ದಾರೆ. 33 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬೀದಿ-ಬೀದಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದೆ. ಅಲ್ಲಿಂದ ಆರಂಭವಾದ ನನ್ನ ರಾಜಕೀಯ ಜೀವನ ಇಂದು ಇಲ್ಲಿಗೆ ಬಂದು ನಿಂತಿದೆ. ಇದಕ್ಕೆಲ್ಲಾ ಮುಖ್ಯ ಕಾರಣವೆಂದರೆ ನನ್ನೂರು ಚಿಕ್ಕಮಗಳೂರು ಜನರದ್ದು ಎಂದಿದ್ದಾರೆ.
ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ಹಿರಿಯರು ಹಾಗೂ ಹೆತ್ತೊಡಲ ಮಗನಂತೆ ಪೋಷಿಸಿದ ಜಿಲ್ಲೆಯ ಜನರ ಅಭಿಮಾನದ ಋಣ ದೊಡ್ಡದ್ದು. ನಿಮ್ಮಗಳ ಪ್ರೀತಿಗೆ ನಾನು ಋಣಿ ಎಂದು ಜಿಲ್ಲೆಯಲ್ಲಿನ ತಮ್ಮ ರಾಜಕೀಯ ಜೀವನದ ಹೆಜ್ಜೆಗುರುತುಗಳನ್ನ ಸ್ಮರಿಸಿದ್ದಾರೆ. ನಿಮ್ಮಗಳ ಪ್ರೀತಿಗೆ ನಾನು ಮೂಕವಿಸ್ಮಿತ.
ನಿಮ್ಮಗಳ ಋಣ ನನ್ನ ಮೇಲಿದೆ. ಮುಂದಿನ ದಿನಗಳಲ್ಲೂ ನಿಮ್ಮ ಸೇವೆಗೆ ನಿಮ್ಮ ಮನೆಮಗನಂತೆ ನಾನು ದುಡಿಯುತ್ತೇನೆಂದು ಪತ್ರದ ಮೂಲಕ ಜಿಲ್ಲೆಯ ಜನರನ್ನ ಸ್ಮರಿಸಿದ್ದಾರೆ. 1999ನೇ ಇಸವಿಯಲ್ಲಿ ಸಗೀರ್ ಅಹಮದ್ ವಿರುದ್ಧ 900 ಮತಗಳಿಂದ ಸೋತಿದ್ದ ಸಿ.ಟಿ.ರವಿ 2004ನೇ ಇಸವಿಯಿಂದ 2020ನೇ ಇಸವಿಯವರೆಗೂ ನಿರಂತರವಾಗಿ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಈ 16 ವರ್ಷದ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಶಾಸಕರಾಗಿರೋ ಸಿ.ಟಿ.ರವಿ 2012ರಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ 2020ರಲ್ಲಿ ಪ್ರವಾಸೋಧ್ಯಮ, ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಮತ್ತು ಯುವಸಬಲೀಕರಣ ಸಚಿವರಾಗಿದ್ದರು. ಈಗ ಕಳೆದ ಎರಡು ತಿಂಗಳಿನಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಇಂದು ದೆಹಲಿಯಲ್ಲಿ ತಮ್ಮ ಕಚೇರಿಯನ್ನ ಆರಂಭಿಸಿದ್ದಾರೆ.