ಹೊರರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಇಳಿಕೆ; ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಕೋಲಾರದ ರೈತರಿಗೆ ನಿರಾಸೆ
ಈ ಸಲ ಟೊಮೆಟೊ ದರ ಇಳಿಕೆಯಾಗಲು ಬೇಡಿಕೆ ಕುಸಿತವೇ ಪ್ರಮುಖ ಕಾರಣ. ಹೌದು, ಮುಂಬೈ, ಪಶ್ಚಿಮ ಬಂಗಾಳ, ನಾಸಿಕ್, ಗುಜರಾತ್ ಕಡೆಗೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ, ಟೊಮೆಟೊ ಹೇರಳವಾಗಿ ಸರಬರಾಜು ಆಗುತ್ತಿತ್ತು, ಆದರೆ ಸ್ಥಳೀಯವಾಗಿ ಆ ಪ್ರದೇಶಗಳಲ್ಲಿ ಮಾರುಕಟ್ಟೆಗೆ ಟೊಮೆಟೊ ಆಗಮಿಸುತ್ತಿರುವುದರಿಂದ ಇಲ್ಲಿನ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ.
ಕೋಲಾರ(ನ.29): ಬಯಲುಸೀಮೆ ಕೋಲಾರದಲ್ಲಿ ಟೊಮೆಟೊ ಬೆಳೆ ರೈತರ ಬೆನ್ನುಲುಬಾಗಿದೆ. ಇಲ್ಲಿ ಬೆಳೆಯುವ ಟೊಮೆಟೊ ವ್ಯಾಪಾರ ವಹಿವಾಟು ನಡೆಸಲು, ಕೋಲಾರದಲ್ಲಿ ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಸರ್ಕಾರ ಸ್ಥಾಪಿಸಿದೆ. ಕೊರೋನಾ ಲಾಕ್ ಡೌನ್ ಆರಂಭದಲ್ಲಿ ಹೇಳ ಹೆಸರಿಲ್ಲದಂತೆ ಆಗಿದ್ದ ಟೊಮೆಟೊ ಹಣ್ಣಿಗೆ, ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು. ಒಂದು ಕ್ರೇಟ್ 15 ಕೆಜಿ ಬಾಕ್ಸ್ ಬೆಲೆ 900 ರೂಪಾಯಿ ವರೆಗೂ ಮುಟ್ಟಿತ್ತು. ಆದರೀಗ ಕೋಲಾರದ ಎಪಿಎಂಸಿಯಲ್ಲಿ ಟೊಮೆಟೊಗೆ ಬೇಡಿಕೆ ಜೊತೆಗೆ, ಬೆಲೆಯು ಇಳಿಕೆಯಾಗಿದೆ. ಕಳೆದ ಮೂರು ವಾರದ ಹಿಂದೆ 15 ಕೆಜಿಯ ಒಂದು ಬಾಕ್ಸ್ ಬೆಲೆ 500 ರೂಪಾಯಿ ಇತ್ತು. ಆದರೆ ನಿನ್ನೆಯಿಂದ ಒಂದು ಬಾಕ್ಸ್ ಬೆಲೆ 300 ರೂಪಾಯಿಗೆ ಇಳಿಕೆಯಾಗಿದೆ. ಉತ್ತಮ ಗುಣಮಟ್ಟದ ಟೊಮೆಟೊಗೆ ಮಾತ್ರ 300 ರೂಪಾಯಿ ಇದೆ, ಆದರೆ ಕಡಿಮೆ ಗುಣಮಟ್ಟದ ಟೊಮೆಟೊಗೆ 50 ರೂಪಾಯಿಗೆ ಕುಸಿದಿದೆ. ಹೀಗಾಗಿ ಭರ್ಜರಿ ಲಾಭದ ನಿರೀಕ್ಷೆಯಿಂದ ಮಾರುಕಟ್ಟೆಗೆ ಆಗಮಿಸುತ್ತಿರುವ ರೈತರು, ಬೆಲೆ ಇಳಿಕೆಯಿಂದ ಬೇಸರ ಹೊರಹಾಕಿದ್ದಾರೆ.
ಪ್ರತಿಸಲ ಟೊಮೆಟೊ ದರ ಇಳಿಕೆಗೆ ಒಂದೊಂದು ಕಾರಣವನ್ನ ಇಲ್ಲಿ ಗಮನಿಸಹುದು, ಸಾಮಾನ್ಯವಾಗಿ ಬೇಡಿಕೆ ಕುಸಿತವಾದಾಗ ಬೆಲೆ ಇಳಿಕೆಯಾಗುವುದು, ಇಲ್ಲವೆ ಕಡಿಮೆ ಗುಣಮಟ್ಟದ ಹಣ್ಣನ್ನು ತೆಗೆದುಕೊಂಡು ಹೋದರು ಬೆಲೆ ಇಳಿಕೆ ಆಗುತ್ತದೆ, ಆದರೆ ಈ ಸಲ ಟೊಮೆಟೊ ದರ ಇಳಿಕೆಯಾಗಲು ಬೇಡಿಕೆ ಕುಸಿತವೇ ಪ್ರಮುಖ ಕಾರಣ. ಹೌದು, ಮುಂಬೈ, ಪಶ್ಚಿಮ ಬಂಗಾಳ, ನಾಸಿಕ್, ಗುಜರಾತ್ ಕಡೆಗೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ, ಟೊಮೆಟೊ ಹೇರಳವಾಗಿ ಸರಬರಾಜು ಆಗುತ್ತಿತ್ತು, ಆದರೆ ಸ್ಥಳೀಯವಾಗಿ ಆ ಪ್ರದೇಶಗಳಲ್ಲಿ ಮಾರುಕಟ್ಟೆಗೆ ಟೊಮೆಟೊ ಆಗಮಿಸುತ್ತಿರುವುದರಿಂದ ಇಲ್ಲಿನ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ.
ಕೋಲಾರ ಜಿಲ್ಲೆಯಾದ್ಯಂತ ಕೆಸಿ ವ್ಯಾಲಿ ಯೋಜನೆಯಿಂದ ನೀರಾವರಿ ಪ್ರದೇಶಗಳು ಸುಧಾರಿಸಿರುವ ಹಿನ್ನಲೆ, ಇಲ್ಲಿ ಟೊಮೆಟೊ ಬೆಳೆಯೋ ರೈತರ ಸಂಖ್ಯೆಯು ಹೆಚ್ಚಾಗಿದೆ, ಹೀಗಾಗಿ ಸೀಸನ್ ಅಲ್ಲದೇ ಇದ್ದರು, ಅನ್‍ಸೀಸನ್‍ನಲ್ಲಿ ಮಾರುಕಟ್ಟೆಗೆ ಟೊಮೆಟೊ 20 ಸಾವಿರ ಕ್ವಿಂಟಾಲ್ ನಷ್ಟು ತೂಕದ ಟೊಮೆಟೊ ಪ್ರತಿದಿನ ಆವಕವಾಗುತ್ತಿದೆ,. ಸಾಮಾನ್ಯವಾಗಿ ಎಪಿಎಂಸಿ ಮಾರುಕಟ್ಟೆಗೆ ಸೀಸನ್ ನಲ್ಲಿ 25 ಸಾವಿರ ಕ್ವಿಂಟಾಲ್ ತೂಕದಷ್ಟು ಟೊಮೆಟೊ ಬರುವುದುಂಟು. ಆದರೆ ಈಗ ಸೀಸನ್ ಅಲ್ಲದೆ ಇದ್ದರೂ 20 ಸಾವಿರ ಕ್ವಿಂಟಾಲ್ ತೂಕದ ಟೊಮೆಟೊ ನಿತ್ಯ ಮಾರುಕಟ್ಟೆಗೆ ಬರುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ರೈತರು ಹೆಚ್ಚಿಗೆ ಟೊಮೆಟೊ ಬೆಳೆಯವತ್ತ ಮತ್ತೆ ಮುಖಮಾಡಿದ್ದಾರೆ ಎಂದು ತಿಳಿಯುತ್ತದೆ. ಈ ಬಗ್ಗೆ ಮಾತನಾಡಿರೊ ಎಪಿಎಂಸಿ ಅಧ್ಯಕ್ಷ್ಯ ಮಂಜುನಾಥ್ , ಬೇಡಿಕೆ ಇಳಿಕೆಯಿಂದಲೇ ಟೊಮೆಟೊ ಬೆಲೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಲಾಕ್ ಡೌನ್ ಸಡಿಲಿಕೆ ನಂತರ, ಕೋಲಾರ ಜಿಲ್ಲೆಯ ಹಲವು ಟೊಮೆಟೊ ಬೆಳೆಗಾರರು, ನಿರಂತರ ಬೆಲೆ ಏರಿಕೆಯಿಂದ ಲಕ್ಷ ಲಕ್ಷ ಲಾಭ ಗಳಿಸಿದ್ದಾರೆ, ಆದರೆ ಹೆಚ್ಚು ಬೇಡಿಕೆ ಮುಂದೆಯೂ ಇರುತ್ತೆ ಎಂಬ ಆಸೆಯಿಂದ ಟೊಮೆಟೊ ಬೆಳೆ ಹಾಕಿದ್ದ ರೈತರಿಗೀಗ ನಿರಾಸೆಯಾಗಿದೆ. ನಿರೀಕ್ಷಿತ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ.
ಒಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ವಹಿವಾಟನ್ನ ಇಲ್ಲಿಯ ಜನರು, ಲಾಟರಿ ವ್ಯಾಪಾರ ಎಂತಲು ಕರೆಯುವುದುಂಟು, ಒಮ್ಮೊಮ್ಮೆ ದಿಢೀರನೆ ಬೆಲೆ ಏರಿಕೆಯಾಗುವುದು, ಮತ್ತೆ ಇಳಿಕೆಯಾಗುವುದು ನಡೆಯುತ್ತಲೇ ಇರುತ್ತದೆ, ಅದಕ್ಕಾಗಿ ಟೊಮೆಟೊ ವಹಿವಾಟನ್ನ ವ್ಯಾಪಾರಿಗಳು ಲಾಟರಿಗೆ ಹೋಲಿಕೆ ಮಾಡಿದ್ದಾರೆ. ಆದರೆ ಒಂದು ಕ್ರೇಟ್ ಟೊಮೆಟೊ ಬಾಕ್ಸ್ ಗೆ ಕನಿಷ್ಟ 200 ರೂಪಾಯಿ ಸಿಕ್ಕರೂ, ರೈತರಿಗೆ ಯಾವುದೇ ನಷ್ಟ ಆಗುವುದಿಲ್ಲ ಎಂದು ಮಾರುಕಟ್ಟೆ ಅಧ್ಯಕ್ಷ್ಯ ಮಂಜುನಾಥ್ ತಿಳಿಸಿದ್ದಾರೆ.