Rajinikanth: ರಜನಿಕಾಂತ್ ರಾಜಕೀಯ ಪ್ರವೇಶದ ಕುತೂಹಲಕ್ಕೆ ಇಂದು ತೆರೆ; ಚುನಾವಣೆಗೆ ಸ್ಪರ್ಧಿಸುತ್ತಾರಾ ತಲೈವಾ?
Rajinikanth: ಇಂದು ರಜನಿ ಮಕ್ಕಳ್ ಮಂಡ್ರಂ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಿರುವ ರಜನಿಕಾಂತ್ ತಾವು ಚುನಾವಣೆಗೆ ಸ್ಪರ್ಧಿಸುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಚೆನ್ನೈ (ನ. 30): ಖ್ಯಾತ ನಟ ರಜನಿಕಾಂತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಈ ಪ್ರಶ್ನೆ ಬಹಳ ಸಮಯದಿಂದ ಕೇಳಿಬರುತ್ತಲೇ ಇದೆ. ಅವರ ಅನಾರೋಗ್ಯದ ಬಳಿಕ ಈ ಕುರಿತು ಚರ್ಚೆಗಳು ಕಡಿಮೆಯಾಗಿದ್ದವು. ಆದರೆ, ಇದೀಗ ರಜನಿಕಾಂತ್ ಅವರ ರಾಜಕೀಯ ವೃತ್ತಿಯ ಬಗ್ಗೆ ಮತ್ತೆ ಸುದ್ದಿಗಳು ಹರಿದಾಡುತ್ತಿದ್ದು, ಇಂದು ರಜನಿಕಾಂತ್ ಮುಂದಿನ ವಿಧಾನಸಭೆಗೆ ಸ್ಪರ್ಧಿಸುವ ಬಗ್ಗೆ ನಿಖರ ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ. ಇನ್ನೇನು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಜಿನಿಕಾಂತ್ ರಜಿನಿ ಮಕ್ಕಲ್ ಮಂದ್ರಾಮ್ ಪಕ್ಷದ ಪದಾಧಿಕಾರಿಗಳ ಜೊತೆ ರಜನಿಕಾಂತ್ ಮಹತ್ವದ ಸಭೆ ನಡೆಸುವ ಸಾಧ್ಯತೆಯಿದೆ.
ಸೂಪರ್ಸ್ಟಾರ್ ರಜನಿಕಾಂತ್ ರಾಜಕೀಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಗ್ಗೆ ಕೆಲವು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ರಜನಿಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ, ಕಳೆದ ಮಾರ್ಚ್ ತಿಂಗಳಲ್ಲಿ ರಜನಿ ಮಕ್ಕಳ್ ಮಂಡ್ರಂ ಎಂಬ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಅವರು ರಾಜಕಾರಣದಿಂದ ದೂರವೇ ಉಳಿದಿದ್ದರು. ಅಲ್ಲದೆ, ವೈದ್ಯರು ಕೂಡ ಇಂತಹ ಆರೋಗ್ಯ ಪರಿಸ್ಥಿತಿಯಲ್ಲಿ ರಾಜಕೀಯದಿಂದ ದೂರ ಇರುವುದೇ ಉತ್ತಮ ಎಂಬ ಸಲಹೆ ನೀಡಿದ್ದರು ಎನ್ನಲಾಗಿದೆ.
ಆದರೆ ಕೆಲವು ವಾರಗಳ ಹಿಂದೆ ಅವರ ಬೆಂಬಲಿಗರು ಮತ್ತೆ ಸಕ್ರಿಯ ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಜನಿ ಮಕ್ಕಳ್ ಮಂಡ್ರಂ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಿರುವ ತಲೈವಾ ತಾವು ಚುನಾವಣೆಗೆ ಸ್ಪರ್ಧಿಸುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸಕ್ರಿಯ ರಾಜಕಾರಣದ ಬಗ್ಗೆ ರಜನಿ ಮಕ್ಕಳ್ ಮಂಡ್ರಂ ಜಿಲ್ಲಾ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ ಬಳಿಕ ತೀರ್ಮಾನಿಸಲಾಗುವುದು ಎಂದಿದ್ದಾರೆ. 2021ರ ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ತಮ್ಮದೇ ಆದ ಪ್ರಾದೇಶಿಕ ಪಕ್ಷದ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಧುಮುಕಲಿದ್ದಾರಾ? ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ.
ರಜನಿಕಾಂತ್ ಅವರಿಗೆ ಕಿಡ್ನಿ ವೈಫಲ್ಯವಾಗಿ ಚಿಕಿತ್ಸೆ ಪಡೆದಿದ್ದರು. ಅವರ ಆರೋಗ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಹೆಚ್ಚು ಪ್ರಯಾಣ ಮಾಡುವುದು, ಒತ್ತಡ ತೆಗೆದುಕೊಳ್ಳುವಂತಹ ಕೆಲಸಗಳಿಗೆ ಕೈ ಹಾಕದಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ, ರಜನಿಕಾಂತ್ ರಾಜಕೀಯದಿಂದ ದೂರ ಸರಿಯಲಿದ್ದಾರೆ ಎನ್ನಲಾಗಿತ್ತು.