ನಿವಾರ್ ಆಯ್ತು, ಈಗ ಬುರೇವಿ ಚಂಡಮಾರುತ; ಕರ್ನಾಟಕದಲ್ಲಿ ಮಳೆಯಾಗುತ್ತಾ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಪ್ರಬಲ ಮಾರುತ ನಿರ್ಮಣವಾಗಿದ್ದು ದಕ್ಷಿಣ ಭಾರತದ ದಕ್ಷಿಣ ಭಾಗಗಳಲ್ಲಿ ಮತ್ತು ಶ್ರೀಲಂಕಾದ ಉತ್ತರ ಭಾಗಗಳಲ್ಲಿ ಅನಾಹುತ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು(ಡಿ. 01): ನಿವಾರ್ ಚಂಡಮಾರುತ ಅಬ್ಬರಿಸಿ ಕಣ್ಮರೆಯಾಗುತ್ತಿದ್ದಂತೆಯೇ ಈಗ ಮತ್ತೊಂದು ಚಂಡಮಾರುತ ನೆಲಕ್ಕಪ್ಪಳಿಸಲು ಅಣಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ನಿನ್ನೆ ವಾಯುಭಾರ ಕುಸಿತದಿಂದ ಬುರೇವಿ (Burevi) ಚಂಡಮಾರುತ ನಿರ್ಮಾಣವಾಗಿದ್ದು ಇವತ್ತಿನಿಂದ ನಾಲ್ಕು ದಿನಗಳ ಕಾಲ ದೇಶದ ದಕ್ಷಿಣದ ಕೆಲ ಭಾಗಗಳಲ್ಲಿ ಮಳೆ ಗಾಳಿ ರಾಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತದ ನೇರ ಪರಿಣಾಮವಾಗಿ ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 2 ಮತ್ತು 3ರಂದು ಭಾರೀ ಮಳೆಯಾಗುವ ಸಂಭವ ಇದೆ. ಇವತ್ತು ಡಿಸೆಂಬರ್ 1ರಿಂದ ಆರಂಭಗೊಂಡು ಡಿ. 4ರವರೆಗೆ ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರ ಪ್ರದೇಶ, ಲಕ್ಷದ್ವೀಪ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾಗದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ಬುರೇವಿ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಒಳನಾಡುಗಳಾದ ಕೊಡಗು, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ ಕೆಲ ಭಾಗಗಳಲ್ಲಿ ಡಿ. 3 ಮತ್ತು 4ರಂದು ಗುಡುಗು ಸಹಿತ ಮಳೆಯಾಗಬಹುದು ಎಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ
ಇನ್ನು, ಬುರೇವಿ ಚಂಡಮಾರುತ ಡಿಸೆಂಬರ್ 2ರಂದು, ಅಂದರೆ ನಾಳೆ ಸಂಜೆಯ ಬಳಿಕ ಲಂಕಾ ಕಡಲತೀರವನ್ನು ಅಪ್ಪಳಿಸಲಿದೆ. ಮರುದಿನ, ಅಂದರೆ ಡಿಸೆಂಬರ್ 3ರಂದು ತಮಿಳುನಾಡಿನ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ಸುತ್ತಮುತ್ತಲ ಪ್ರದೇಶಗಳಿಗೆ ಬುರೇವಿ ದಾಂಗುಡಿ ಇಡಲಿದೆ. ಡಿಸೆಂಬರ್ 3 ಮತ್ತು 4ರಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ಕೇರಳದ ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಡಿಸೆಂಬರ್ 4ರವರೆಗೆ Burevi ಚಂಡಮಾರುತದಿಂದ ಕಡಲು ಹೆಚ್ಚು ಅಪಾಯಕಾರಿ ಆಗಿರುವುದರಿಂದ ಯಾರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರಿಕೆ ಚಟುವಟಿಕೆಯನ್ನು ಮುಂದಿನ ಸೂಚನೆ ಸಿಗುವವರೆಗೂ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲುಪ್ಪುಳ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.