ಬಳ್ಳಾರಿಗೆ ಸೇರ್ಪಡೆಯಾಗುತ್ತಾ ಚಿತ್ರದುರ್ಗದ ಮೊಳಕಾಲ್ಮೂರು?; ಜೋರಾಗಿದೆ ಪರ-ವಿರೋಧ ಚರ್ಚೆ
ಮೊಳಕಾಲ್ಮೂರು ಜನರು 371ಜೆ ಗೆ ಒಳ ಪಡಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಈ ಕುರಿತು ಏನು ನಿರ್ಧಾರ ಕೈಗೊಳ್ಳಬೇಕು ಎಂಬುದನ್ನ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ಆದರೆ ನನ್ನ ಅಭಿಪ್ರಾಯ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಕಾರಣ 371ಜೆ ಗೆ ಸೇರಿಸಿದರೆ ಚೆನ್ನಾಗಿರುತ್ತದೆ ಎಂದುಸಚಿವ ಬಿ. ಶ್ರೀ ರಾಮುಲು ಹೇಳಿದ್ದಾರೆ.
ಚಿತ್ರದುರ್ಗ(ಡಿ.02): ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಹೊಸ ಜಿಲ್ಲೆ ಮಾಡಿದ ವಿಚಾರ ರಾಜ್ಯದಲ್ಲಿ ಕಿಚ್ಚು ಹೊತ್ತಿಸಿದೆ. ಒಂದು ಕಡೆ ಬೆಳಗಾವಿ ವಿಭಜನೆ ಕೂಗು ಹೆಚ್ಚಾಗುತ್ತಿದ್ದರೆ, ಇತ್ತ ಮಧ್ಯ ಕರ್ನಾಟಕದ ಹೆಬ್ಬಾಗಿಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕನ್ನ ಬಳ್ಳಾರಿಗೆ ಸೇರಿಸುವ ಕುರಿತು ಪರ ವಿರೋಧ ಚರ್ಚೆಗಳು ಜೋರಾಗಿಯೇ ಕೇಳಿ ಬರುತ್ತಿವೆ. ಕೆಲ ಹೋರಾಟಗಾರರು ಬಳ್ಳಾರಿಗೆ ಸೇರಿಸೋಕೆ ಸರ್ಕಾರಕ್ಕೆ ಮನವಿ ಮಾಡಿದ್ರೆ, ಇನ್ನೂ ಕೆಲ ಹೋರಾಟಗಾರರು, ಜನ ಸಾಮಾನ್ಯರು ತಾಲೂಕನ್ನ ಬೇರ್ಪಡಿಸಕೂಡದು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕದ ಪ್ರಮುಖ ಜಿಲ್ಲೆ, ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾಗಿದ್ದ, ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ವಿಭಜನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಜಿಲ್ಲೆಗಳ ವಿಭಜನೆ ಕೂಗು ಜೋರಾಗಿದೆ.
ಒಂಬತ್ತು ತಾಲ್ಲೂಕುಗಳಿದ್ದ, ಅಖಂಡ ಬಳ್ಳಾರಿ ಎರಡು ಭಾಗಗಳಾಗಿದ್ದು, ಇದೀಗ ರಾಜ್ಯದ ಮತ್ತೊಂದು ಜಿಲ್ಲೆಯ ತಾಲೂಕಿನ ವಿಭಜನೆಗೆ ಕೂಗು ಕೇಳಿ ಬರುತ್ತಿದೆ. ಸತತ ಮಳೆಯಿಲ್ಲದೆ ಬರದ ನಾಡು ಎಂಬ ಹಣೆ ಪಟ್ಟಿ ಹೊತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಇದೀಗ ವಿಭಜನೆಯ ಕೂಗು ಕೇಳಿ ಬರುತ್ತಿದೆ. ಬಳ್ಳಾರಿ ಇಬ್ಬಾಗದ ಬಳಿಕ ಚಿಕ್ಕ ಜಿಲ್ಲೆಯಾಗಿರುವ ಗಣಿ ನಾಡಿಗೆ ಸಮೀಪವರ್ತಿಯಾಗಿರೋ ಮೊಳಕಾಲ್ಮೂರು ತಾಲ್ಲೂಕು ಸೇರ್ಪಡೆ ಚರ್ಚೆ ಜೋರಾಗಿದೆ. ಇದಕ್ಕೆ ಮೊಳಕಾಲ್ಮೂರಿನಲ್ಲಿ ಪರ-ವಿರೋಧ ಚರ್ಚೆಗಳು ಸಹ ಜೋರಾಗಿದೆ. ಈ ಕುರಿತು ಹಲವು ಹೋರಾಟಗಾರರು ತಾಲ್ಲೋಕನ್ನು ಬಳ್ಳಾರಿಗೆ ಸೇರಿಸಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮೊಳಕಾಲ್ಮೂರು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀ ರಾಮುಲು, ಬಳ್ಳಾರಿ ಮೊದಲು 8-9 ತಾಲ್ಲೂಕುಗಳನ್ನ ಹೊಂದಿದ್ದ ಅಖಂಡ ಜಿಲ್ಲೆ. ಈಗ ಕೇವಲ ಐದು ವಿಧಾನಸಭಾ ಕ್ಷೇತ್ರಗಳ ಜಿಲ್ಲೆಯಾಗಿದೆ. ಮೊಳಕಾಲ್ಮೂರು ಜನರು 371ಜೆ ಗೆ ಒಳ ಪಡಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಈ ಕುರಿತು ಏನು ನಿರ್ಧಾರ ಕೈಗೊಳ್ಳಬೇಕು ಎಂಬುದನ್ನ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ಆದರೆ ನನ್ನ ಅಭಿಪ್ರಾಯ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಕಾರಣ 371ಜೆ ಗೆ ಸೇರಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ ಇದನ್ನ ಸೇರಿಸುವುದರಿಂದ ವಿಶೇಷ ಹಣ ಬರುವ ಸ್ವಾರ್ಥ ನನ್ನದು ಎಂದಿದ್ದು, ಬಳ್ಳಾರಿಗೆ ಸೇರಿಸುವ ಕುರಿತು ಹೋರಾಟಗಾರರು ನಿಲುವನ್ನ ನೋಡಿ ಅಂತಿಮ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಇನ್ನು, ಮೊಳಕಾಲ್ಮೂರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕು ಎನ್ನುವುದು ಕೇವಲ ಹೋರಾಟಗಾರರ ಒತ್ತಾಯವಾಗಿರುವುದು ತಾಲ್ಲೋಕಿನಾದ್ಯಂತ ಚರ್ಚೆಯಾಗುತ್ತಿದೆ. ಈ ಬಗ್ಗೆ ಜನ ಸಾಮಾನ್ಯರ ಭಾರೀ ವಿರೋಧಗಳು ಕೂಡ ವ್ಯಕ್ತವಾಗುತ್ತಿವೆ. ಅಲ್ಲದೇ ಬಾರಿ ಪ್ರತಿಭಟನೆಗಳು ಕೂಡಾ ಕ್ಷೇತ್ರದಲ್ಲಿ ನಡೆಯಿತ್ತಿವೆ. ಅಷ್ಟೇ ಅಲ್ಲದೇ ಮೊಳಕಾಲ್ಮೂರನ್ನ ಬಳ್ಳಾರಿಗೆ ಸೇರ್ಪಡೆ ಮಾಡುವ ಸಂಚು ನಡೆಸುತ್ತಿದ್ದಾರೆ, ಸರ್ಕಾರಕ್ಕೆ ಬೇರೆಯದ್ದೇ ರೀತಿಯಲ್ಲಿ ಮನವರಿಕೆ ಮಾಡುತ್ತಿದ್ದಾರೆ ಅನ್ನುವ ಆರೋಪಗಳು ಬಳ್ಳಾರಿ ನಾಯಕರ ವಿರುದ್ಧ ಕೇಳಿ ಬಂದಿವೆ.
ಆದರೆ ಮೊಳಕಾಲ್ಮೂರು ತಾಲ್ಲೂಕಿನ ಅಭಿವೃದ್ದಿಗೆ ವಿಶೇಷ ಅನುದಾನ ನೀಡಲು ಹೋರಾಟ ಮಾಡಲಾಗುತ್ತಿದೆಯೇ ವಿನಃ ಬಳ್ಳಾರಿಗೆ ಸೇರಿಸುವಂತೆ ಒತ್ತಾಯ ಮಾಡಿಲ್ಲ ಎನ್ನುವುದು ಜನಾಭಿಪ್ರಾಯವಾಗಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ನಮಗೆ ಜಿಲ್ಲೆಯಲ್ಲಿ ಇರಬೇಕು ಅನ್ನುವ ಒತ್ತಾಸೆ ಇದೆ. ಆದರೆ 371 ಜೆ ಗೆ ಸಂಬಂಧಿಸಿದ ಸೌಲಭ್ಯಗಳು ನಮಗೆ ಸಿಗಬೇಕು ಎಂಬುದು ಜನರ ಮನವಿಯಾಗಿದೆ.ಇದನ್ನ ಬಳ್ಳಾರಿ ಜಿಲ್ಲೆಯ ಮುಖಂಡರು ದುರುಪಯೋಗ ಮಾಡಿಕೊಳ್ಳಬಾರದು ಅಂತ ಮನವಿ ಮಾಡಿದ್ದಾರೆ.
ಒಟ್ಟಾರೆ ಐತಿಹಾಸಿಕ ಹಿನ್ನಲೆಯುಳ್ಳ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಕಳಶದಂತಿದ್ದ, ಮೊಳಕಾಲ್ಮೂರು ಬಳ್ಳಾರಿ ಸೇರ್ಪಡೆ ಆಗುತ್ತೆ ಅನ್ನೋ ಗುಸು ಗುಸು ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಜನರಲ್ಲಿ ಭಾರೀ ಪರ- ವಿರೋಧ ಚರ್ಚೆಗಳು ಏರ್ಪಟ್ಟಿದ್ದು, ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಉಳಿಯಬೇಕು ಎಂಬ ಕೂಗು ಕೇಳಿಬಂದಿದೆ. ಆದರೆ ಈ ಪರ ವಿರೋಧಗಳ ಚರ್ಚೆ,ಹೋರಾಟಗಳನ್ನ ಗಮನಿಸಿ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.