ಬಸ್ ಪ್ರಯಾಣಿಕರೇ ಗಮನಿಸಿ!; ಇಂದು KSRTC, BMTC ಸೇರಿದಂತೆ 4 ಸಾರಿಗೆ ನೌಕರರ ಮುಷ್ಕರ
KSRTC BMTC Employees Strike: ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ, ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆಯನ್ನು ಇಂದು ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು (ಡಿ. 11): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ, ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆಯನ್ನು ಇಂದು ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದೆ. ಈ ನಾಲ್ಕು ನಿಗಮಗಳಿಂದ 1.30 ಲಕ್ಷ ನೌಕರರಿದ್ದು, ಅವರಲ್ಲಿ ಬಹುತೇಕರು ಇಂದು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ, ಬೆಂಗಳೂರಿಗರೇ ಎಚ್ಚರ! ಅಪ್ಪಿತಪ್ಪಿಯೂ ಇಂದು ಬಿಎಂಟಿಸಿ ಬಸ್ಗಳನ್ನು ನಂಬಿ ನೀವು ಮನೆಯಿಂದ ಹೊರಡಬೇಡಿ. ಇಂದು ಮುಷ್ಕರಕ್ಕೆ ಬೆಂಬಲ ಸೂಚಿಸಿ, ಬೆಂಗಳೂರಿನ ಯಾವ ಡಿಪೋಗಳಿಂದಲೂ ಬಸ್ಗಳು ಹೊರಟಿಲ್ಲ.
ನಿನ್ನೆಯೂ ಬೃಹತ್ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿಲ್ಲ. ಅಲ್ಲದೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ. ತೀವ್ರ ಸ್ವರೂಪ ಪಡೆದಿರುವ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ಗಳು ಬಸ್ ನಿಲ್ದಾಣ, ಡಿಪೋಗಳಲ್ಲಿಯೇ ನಿಂತಿವೆ. ಇದರಿಂದ ಮುಂಜಾನೆಯಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಬೆಂಗಳೂರಿನ ಯಶವಂತಪುರದ ಡಿಪೋದಲ್ಲಿ ಸಾಲಾಗಿ ಬಸ್ಗಳು ನಿಂತಿವೆ. ಬಿಡದಿ ಬಳಿ ಕೆಎಸ್ಆರ್ಟಿಸಿ ಬಸ್ಗಳು ನಿಂತಿವೆ. ಬನಶಂಕರಿ ಡಿಪೋದಿಂದಲೂ ಇನ್ನೂ ಬಸ್ಗಳು ಹೊರಟಿಲ್ಲ. ಇಂದಿನ ಬಂದ್ಗೆ ಬೆಂಬಲ ವ್ಯಕ್ತಪಡಿಸಿ, ಬಿಎಂಟಿಸಿ ನೌಕರರು ಕೆಲಸಕ್ಕೆ ಹಾಜರಾಗದೆ ಇರಲು ನಿರ್ಧರಿಸಿದ್ದಾರೆ. 200ಕ್ಕೂ ಹೆಚ್ಚು ಬಸ್ಗಳು ಇನ್ನೂ ಡಿಪೋದಲ್ಲೇ ನಿಂತಿವೆ.
ನಿನ್ನೆ ರಾತ್ರಿ ಇಂದಿನ ಮುಷ್ಕರದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಎಂಟಿಸಿ ನೌಕರರ ಅಸೋಸಿಯೇಷನ್ ಮುಖ್ಯಸ್ಥ ಚಂದ್ರಶೇಖರ್, ನಾವು ಯಾವುದೇ ಕಾರಣಕ್ಕೂ ಕೆಲಸಕ್ಕೆ ಹಾಜರಾಗುವುದಿಲ್ಲ. ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡರೂ ಪರವಾಗಿಲ್ಲ. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇ ಬೇಕು. ಇದು ನೌಕರರೇ ಕೈಗೊಂಡಿರುವ ನಿರ್ಧಾರ. ಬೇರೆ ಸಂಘಟನೆಗಳು ಕೂಡ ನಮ್ಮೊಂದಿಗೆ ಕೈ ಜೋಡಿಸಿವೆ. ಒಂದು ಸಂಘಟನೆಯನ್ನು ಹೊರತುಪಡಿಸಿ ಉಳಿದ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ. ನಮಗೆ ಬೆಂಬಲ ನೀಡುವಂತೆ ಎಐಟಿಸಿಯುಗೆ ಮನವಿ ಮಾಡಿದ್ದೆವು. ಅವರು ಸೂಕ್ತ ಉತ್ತರ ನೀಡಿಲ್ಲ ಎಂದಿದ್ದರು.
ಸಾರಿಗೆ ನಿಗಮಗಳಿಂದ ಎಸ್ಮಾ ಅಸ್ತ್ರ ಪ್ರಯೋಗ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಸತ್ತಿರುವ ನಮಗೆ ಏನು ಮಾಡಲು ಸಾಧ್ಯ? ಇದು ಕಾರ್ಮಿಕರ ಜೀವನದ ಪ್ರಶ್ನೆಯಾಗಿರುವುದರಿಂದ ಶುಕ್ರವಾರ ಬೆಳಿಗ್ಗೆ 6ರಿಂದ 4 ನಿಗಮಗಳು ಒಗ್ಗಟ್ಟಾಗಿ ಬಂದ್ ಮಾಡುವುದು ಖಚಿತ ಎಂದಿದ್ದರು.
ಬಿಎಂಟಿಸಿ ಸಾರಿಗೆ ನೌಕರರ ಮುಖಂಡ ಆನಂದ್ ಹಾಗೂ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಿನ್ನೆ ರಾತ್ರಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಇಂದಿನ ಬಂದ್ ಬಗ್ಗೆ ಮಾತನಾಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ದುಡಿಯುವ ಜನರನ್ನ ಸರ್ಕಾರ ಅವಮಾನಿಸುತ್ತಿದೆ. ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ಸ್ ಎಲ್ಲರೂ ಶ್ರಮಜೀವಿಗಳು. ಅವರೆಲ್ರೂ ಶಿಸ್ತು ಬದ್ಧವಾಗಿ ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಲು ನಿಂತಿದ್ದರು. ಸರ್ಕಾರ ಪೊಲೀಸರನ್ನು ಬಿಟ್ಟು ಪ್ರತಿಭಟನಾ ನಿರತರ ದಾರಿ ತಪ್ಪಿಸಿದೆ. ಬಂಧಿಸುವುದು, ರಾತ್ರಿ 10 ಗಂಟೆಗೆ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದಿದ್ದರು.
ನಾವೇನೂ ಹತ್ತಾರು ಸಾವಿರ ಕೋಟಿ ಕೊಡಿ, ಈಗಲೇ ಕೊಡಿ ಎಂದಿರಲಿಲ್ಲ. ಸರ್ಕಾರ ಕೊಡಬೇಕಾದ ಉತ್ತರವನ್ನು ಸರಿಯಾಗಿ ನೀಡಿಲ್ಲ. ಇಂದು ಕೆಲಸವನ್ನ ನಿಲ್ಲಿಸಲು ಯಾರಿಗೂ ಹೇಳಿರಲಿಲ್ಲ. ಬಿಡುವು ಇದ್ದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾ ಬೆಳಿಗ್ಗೆ 6 ರಿಂದ ಕರ್ನಾಟಕದ 4 ನಿಗಮದ ನೌಕರರು ಕಾರ್ಯ ನಿರ್ವಹಿಸುವುದಿಲ್ಲ. ಸಾರಿಗೆ ಸಚಿವರಿಂದಲೂ ಯಾವುದೇ ಉತ್ತರ ಬಂದಿಲ್ಲ. ನಮ್ಮ ಅಳಲನ್ನ ಕೇಳಲು ಬಂದಿದ್ರೆ ಅವರ ಗೌರವ ಹೆಚ್ಚಾಗುತ್ತಿತ್ತು. ಬಂದ್ ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿಯೂ ಮನವಿ ಮಾಡುತ್ತೇವೆ ಎಂದಿದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು