Karnataka Weather: ಶಿವಮೊಗ್ಗ, ಬೆಳಗಾವಿ, ಮಂಗಳೂರು ಸೇರಿ ಕರ್ನಾಟಕದ ಹಲವೆಡೆ ಇಂದು, ನಾಳೆ ಮಳೆ ಸಾಧ್ಯತೆ
Karnataka Rain: ಇಂದು ಮಂಗಳೂರು, ಉಡುಪಿ, ಮಲೆನಾಡು, ಕೊಡಗು, ಬೆಂಗಳೂರು, ಮೈಸೂರು, ಬೆಳಗಾವಿ, ಹಾವೇರಿ, ಗದಗ, ಹಾಸನದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ.
ಬೆಂಗಳೂರು (ಡಿ. 11): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿದೆ. ಇಂದು ಕೂಡ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಇಂದು ಮತ್ತು ನಾಳೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನ ಕರಾವಳಿ, ಬೆಳಗಾವಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಕೊಡಗು, ಚಿತ್ರದುರ್ಗ, ಹಾಸನದಲ್ಲಿ ಮಳೆ ಮುಂದುವರೆಯಲಿದೆ.
ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ನಿನ್ನೆ ಬಿಸಿಲಿನ ದರ್ಶನವಾಗಿತ್ತು. ಇಂದು ಕೂಡ ಬೆಂಗಳೂರಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ತೀರ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆ ಸುರಿಯಲಿದೆ ಎನ್ನಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಡಿ. 12ರವರೆಗೂ ಮಳೆಯಾಗುವ ಸಾಧ್ಯತೆಯಿದೆ.
ಇಂದು ಮಂಗಳೂರು, ಉಡುಪಿ, ಮಲೆನಾಡು, ಕೊಡಗು, ಬೆಂಗಳೂರು, ಮೈಸೂರು, ಹಾಸನದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಡಿ. 12ರವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ ಭಾಗದಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಚಳಿ ಹೆಚ್ಚಾಗಲಿದ್ದು, ತುಂತುರು ಮಳೆಯೂ ಸುರಿಯುವ ಸಾಧ್ಯತೆ ಇದೆ. ನಿನ್ನೆಯಂತೆ ಇಂದು ಕೂಡ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಬಿಸಿಲು ಕಾಣಿಸಿಕೊಂಡಿದ್ದು, ಸಂಜೆ 5 ಗಂಟೆಯವರೆಗೂ ಬಿಸಿಲು ಇರಲಿದೆ. ಬಳಿಕ ರಾತ್ರಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ.
ಇಂದು ಸಿಕ್ಕಿಂ, ಮಹಾರಾಷ್ಟ್ರದ ಕರಾವಳಿ, ಕೇರಳ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಕರ್ನಾಟಕದ ಕರಾವಳಿ ತೀರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅದರ ಪರಿಣಾಮವಾಗಿ ಕರ್ನಾಟಕದ ಗಡಿ ಭಾಗದಲ್ಲಿಯೂ ಮಳೆಯಾಗಬಹುದು.