ಮಾಲಿನ್ಯಕಾರಕ ಕೈಗಾರಿಕೆ ಮುಚ್ಚಲು ಆಗ್ರಹಿಸಿ ಯಾದಗಿರಿಯ 8 ಗ್ರಾಮಗಳಿಂದ ಗ್ರಾ.ಪಂ. ಚುನಾವಣೆ ಬಹಿಷ್ಕಾರ

ವಿವಿಧ ಕೈಗಾರಿಕೆಗಳನ್ನ ಸ್ಥಾಪಿಸುವ ಭರವಸೆ ನೀಡಿ ರೈತರಿಂದ 3 ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಈಗ ಮಾಲಿನ್ಯಕಾರಕ ಕೆಮಿಕಲ್ ಘಟಕ ಮಾತ್ರ ನಡೆಸಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಯಾದಗಿರಿಯ ಕಡೇಚೂರ ಸೇರಿದಂತೆ 8 ಗ್ರಾಮಗಳ ಜನರು ಗ್ರಾ.ಪಂ. ಚುನಾವಣೆ ಬಹಿಷ್ಕರಿಸಿದ್ದಾರೆ.

ಯಾದಗಿರಿ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ವಲಸೆ ಹೋಗುವುದಕ್ಕೆ ಕಡಿವಾಣ ಹಾಕಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತದೆ ಎಂದು 2012 ನೇ ಸಾಲಿನಲ್ಲಿ ಅಂದಿನ ಬಿಜೆಪಿ ಸರಕಾರ ಯಾದಗಿರಿ ತಾಲೂಕಿನ ಕಡೇಚೂರ – ಬಾಡಿಹಾಳ ಗ್ರಾಮದಲ್ಲಿ ರೈತರಿಂದ 3232 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಜವಳಿ ಪಾರ್ಕ್, ಕೊಕೊ ಕೊಲಾ ಕಂಪನಿ ಹಾಗೂ ಇನ್ನಿತರ ಕಂಪನಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡರೂ ಬೆರಳೆಣಿಕೆಯಷ್ಟು ಕೈಗಾರಿಕೆಗಳು ಮಾತ್ರ ಈಗ ಆರಂಭವಾಗಿವೆ. ಅದರಲ್ಲೂ ಕೂಡ ಕೆಮಿಕಲ್ ಕಂಪನಿ ಆರಂಭ ಮಾಡಿರುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ.

ಅದೇ ರೀತಿ ಇನ್ನೂ ವೈಜ್ಞಾನಿಕ ದರದಲ್ಲಿ ಪರಿಹಾರ ನೀಡುವ ಕೆಲಸ ಮಾಡಿಲ್ಲ ‌. ಕೈಗಾರಿಕೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕಲ್ಪಿಸುವ ಅಭಿವೃದ್ಧಿ ಕೆಲಸ ಮಾಡಿ ಕೈತೊಳೆದುಕೊಳ್ಳಲಾಗಿದೆ‌. ಆದರೆ, ಇನ್ನೂ ಬೃಹತ್ ಕೈಗಾರಿಕೆಗಳು ಆರಂಭ ಮಾಡಿಲ್ಲ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಸಿಕ್ಕಿಲ್ಲ. ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ಈಗ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಮಾಡಿದ್ದಾರೆ.

ಕಡೇಚೂರ ಗ್ರಾಮ ಪಂಚಾಯತಿಗೆ ಒಳಪಡುವ 7 ಗ್ರಾಮಸ್ಥರು ಹಾಗೂ ಸೈದಾಪುರ ಪಂಚಾಯತಿ ಗೆ ಒಳಪಡುವ ಶೆಟ್ಟಿಹಳ್ಳಿ ಗ್ರಾಮಸ್ಥರು ಕಡೇಚೂರ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಮಾಡಿದ್ದಾರೆ. ಕಡೇಚೂರ ಗ್ರಾ.ಪಂ. ವ್ಯಾಪ್ತಿಯ ಕಡೇಚೂರ, ದುಪ್ಪಲ್ಲಿ, ಚಂದಾಪುರ, ಮಾವಿನಹಳ್ಳಿ, ಬಮ್ಮರಾದೊಡ್ಡಿ, ಸೌರಾಷ್ಟ್ರ ಹಳ್ಳಿ ಮತ್ತು ದದ್ದಲ್ ಹಾಗೂ ಸೈದಾಪುರ ಪಂಚಾಯತಿಗೆ ಒಳಪಡುವ ಶೆಟ್ಟಿಹಳ್ಳಿಯ ಗ್ರಾಮಸ್ಥರು ಈಗ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಕಾವು ರಂಗೇರುತ್ತಿದ್ದಂತೆ ಸಭೆ ಸೇರಿ ಗ್ರಾಮಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

ಈ ಬಗ್ಗೆ ಕಡೇಚೂರ ಗ್ರಾಮದ ಮುಖಂಡ ಸಿದ್ದಣ್ಣಗೌಡ ಅವರು ಮಾತನಾಡಿ, ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಿಲ್ಲ. ಅದೇ ರೀತಿ ಬೃಹತ್ ಕೈಗಾರಿಕೆ ಆರಂಭ ಮಾಡಿ ಉದ್ಯೋಗ ಕಲ್ಪಿಸಿಲ್ಲ. ಕೆಲ ಪರಿಸರಕ್ಕೆ ಮಾರಕವಾಗುವ ಕೆಮಿಕಲ್ ಕಂಪನಿ ಆರಂಭದಿಂದ ನಾವು ಬದಕಲು ಆಗುವುದಿಲ್ಲ. ಈ ರಾಸಾಯನಿಕ ಕಂಪನಿ ಮುಚ್ಚಬೇಕು. ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಪರಿಸರಕ್ಕೆ ಧಕ್ಕೆಯಾಗದಂತಹ ಕೈಗಾರಿಕೆಗಳನ್ನು ಆರಂಭ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸುತ್ತಿರುವ 8 ಗ್ರಾಮಗಳ ಜನರು ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದೇವೆಂದರು.

ವಿಧಾನ ಸೌಧಕ್ಕೂ ಮುತ್ತಿಗೆ ಹಾಕಲಾಗುತ್ತದೆ…!ಸಿಎಂ ಬಿಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಯಾವುದೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಸರಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಉ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *