3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್

ಮುಷ್ಕರದ ಹೊರತಾಗಿಯೂ ಬಸ್ ಚಾಲನೆ ಮಾಡಲು ಬರುವ ಚಾಲಕ ನಿರ್ವಾಹಕರು ಮತ್ತು ಬಸ್​ಗಳಿಗೆ ಭದ್ರತೆ ನೀಡುವ ಸಲುವಾಗಿ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ.

ಬೆಂಗಳೂರು (ಡಿ. 13): ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ಸಹ ರಸ್ತೆಗೆ ಇಳಿಯದ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಇಂದು ಸಾರಿಗೆ ನೌಕರರ ಜೊತೆಗೆ ಮಾತುಕತೆಗೆ ಮುಂದಾಗುತ್ತಾರಾ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಂಬುದನ್ನು ಕಾದು ನೋಡಬೇಕಾಗಿದೆ.

ಕಳೆದ ಮೂರು ದಿನಗಳಿಂದ ಬಸ್​ಗಳಿಲ್ಲದೆ ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಬಣಗುಡುತ್ತಿದೆ. ಬಸ್ ಬಾರದಿದ್ದರೂ ನಿಲ್ದಾಣದತ್ತ ಬರುತ್ತಿರುವ ಪ್ರಯಾಣಿಕರು ಬಸ್​ಗಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಖಾಸಗಿ ಬಸ್​ಗಳು ಕಾರ್ಯಾಚರಣೆ ನಡೆಸಿವೆ. ಹಾಸನ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿ ಹಲವೆಡೆಗೆ ಖಾಸಗಿ ಬಸ್​ಗಳು ಸಂಚಾರ ಮಾಡುತ್ತಿವೆ.

ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ. ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಬಳಿ ಹೆಚ್ಚಿನ ಬಂದೋಬಸ್ತ್ ವಹಿಸಲಾಗಿದೆ. ಮುಷ್ಕರದ ಹೊರತಾಗಿಯೂ ಬಸ್ ಚಾಲನೆ ಮಾಡಲು ಬರುವ ಚಾಲಕ ನಿರ್ವಾಹಕರು ಮತ್ತು ಬಸ್​ಗಳಿಗೆ ಭದ್ರತೆ ನೀಡುವ ಸಲುವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಬಸ್ ನಿಲ್ದಾಣಕ್ಕೆ ಬರುವ ಬಸ್​ಗಳನ್ನು ಯಾರಾದರೂ ತಡೆದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸುಮಾರು 70ಕ್ಕೂ ಹೆಚ್ಚು ಪೊಲೀಸರ ನಿಯೋಜನೆ‌ ಮಾಡಲಾಗಿದೆ. ಮೆಜೆಸ್ಟಿಕ್​ಗೆ ಬರುವ ಮತ್ತು ಹೋಗುವ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಬಸ್​ಗಳಿಗೆ ಅಡ್ಡಿ ಪಡಿಸಿದರೆ ಸ್ಥಳದಲ್ಲೇ ಬಂಧಿಸಿ, ಕ್ರಮ ಕೈಗೊಳ್ಳಲು ಕರ್ತವ್ಯದಲ್ಲಿರುವ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗೂ ದುಪ್ಪಟ್ಟು ಹಣ ವಸೂಲಿ ಮಾಡುವ ಆಟೋ, ಕ್ಯಾಬ್ ಮತ್ತು ಖಾಸಗಿ ಬಸ್​ಗಳ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ.

ಕಳೆದ ಎರಡು ದಿನಗಳಿಂದ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ರೈಲು, ಖಾಸಗಿ ಬಸ್ ಹಾಗೂ ಹೊರರಾಜ್ಯದ ಬಸ್ ಗಳಿಂದ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರು ಬಳಿಕ ಆಟೋ, ಕ್ಯಾಬ್​ಗಳ ಮೊರೆ ಹೋಗುತ್ತಿದ್ದಾರೆ. ಮೆಜೆಸ್ಟಿಕ್ ಮಾತ್ರವಲ್ಲದೆ ಯಶವಂತಪುರ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲೂ ಸರ್ಕಾರಿ ಬಸ್​ಗಳು ಕಾರ್ಯಾರಂಭ ಮಾಡಿಲ್ಲ. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಂತಿರುವ ಕೆಎಸ್ಆರ್ ಟಿಸಿ ಬಸ್​ಗಳು ಇಂದು ಸಂಚಾರ ನಡೆಸದಿರಲು ನಿರ್ಧರಿಸಿವೆ. ಸಮಸ್ಯೆ ಬಗೆಹರಿದರೆ ಮತ್ತೆ ಕೆಲಸ ಪ್ರಾರಂಭಿಸಲು ಕೆಲವೇ ಸಿಬ್ಬಂದಿ ಮಾತ್ರ ಇದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *