Vishnuvardhan: ವಿಷ್ಣುವರ್ಧನ್ ಪರ ನಿಂತು ತೆಲುಗು ನಟನಿಗೆ ಸೈಲೆಂಟ್ ಆಗಿ ವಾರ್ನಿಂಗ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ ವಿಜಯ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದಿದ್ದಾರೆ. ಜೊತೆಗೆ ಜಗ್ಗೇಶ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಅನಿರುದ್ಧ್ ಸೇರಿ ಹಲವು ಘಟಾನುಘಟಿ ಕಲಾವಿದರು ತೆಲುಗು ನಟನಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಸ್ಯಾಂಡಲ್ವುಡ್ನ ದಾದಾ, ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಇಡೀ ಸ್ಯಾಂಡಲ್ವುಡ್ ತಿರುಗಿಬಿದ್ದಿದೆ. ಕನ್ನಡದ ಕಿರಿಯ ಸ್ಟಾರ್ ನಟರಿಂದ ಹಿಡಿದು ಹಿರಿಯರ ವರೆಗೆ ವಿಜಯ್ ರಂಗರಾಜು ಹೇಳಿಕೆ ಹಿಂಪಡೆಯುವಂತೆ ಆಗ್ರಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಛಾಪು ಮೂಡಿಸಿದ್ದ ನಟ ಡಾ. ವಿಷ್ಣುವರ್ಧನ್ ಅಣ್ಣಾವ್ರ ನಂತರದ ಸ್ಥಾನದಲ್ಲಿ, ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಇಂತಹ ಮೇರುನಟನನ್ನು ತೆಲುಗು ಪೋಷಕ ನಟ ವಿಜಯ್ ರಂಗರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಪಮಾನ ಮಾಡಿದ್ದು ಈಗ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ಸದ್ಯ ರಾಕಿಂಗ್ ಸ್ಟಾರ್ ಯಶ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದಿದ್ದಾರೆ.
‘ಸರಿ ದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ. ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ ಉಳಿದು ಬಿಡುತ್ತಾರೆ. ವಿಷ್ಣು ಸಾರ್ ಕನ್ನಡ ನಾಡು ಕಂಡ ಮಹಾನ್ ಸಾಧಕರು. ಅವರ ಶ್ರಮ, ಪ್ರತಿಭೆ ಹಾಗೂ ನಟನೆಯ ಜೊತೆ ಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ಮನೆ ಮನದಲ್ಲಿ ಅಜರಾಮರವಾಗಿರುವವರು. ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲ ಚಿತ್ರರಂಗಗಳ ಜೊತೆಗೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂಥವರಿಂದ ತಪ್ಪುದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು’ ಎಂದು ಯಶ್ ಹೇಳಿದ್ದಾರೆ.
ಇನ್ನೂ ಗೋಲ್ಡರ್ ಸ್ಟಾರ್ ಗಣೇಶ್ ಕೂಡ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದು, ಕನ್ನಡದ ಮೇರು ನಟರಾದ ನಮ್ಮ ವಿಷ್ಣು ದಾದಾ ಬಗ್ಗೆ ಈ ರೀತಿ ಮಾತನಾಡುವುದು ಅತ್ಯಂತ ಅಕ್ಷಮ್ಯ ಹಾಗೂ ನಾನಿದನ್ನು ಖಂಡಿಸುತ್ತೇನೆ. ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ. ಯಾವುದೇ ಸಿನಿಮಾರಂಗಕ್ಕೆ ಸಂಬಂಧಿಸಿದ ಕಲಾವಿದನಾದರೂ, ಮತ್ತೊಂದು ಸಿನಿಮಾರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ, ಗೌರವ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಬೇಕು. ಅದನ್ನು ವಿಷ್ಣುದಾದಾ ಹಿಂದಿನಿಂದ ಪಾಲಿಸುತ್ತ ಬಂದಿದ್ದಾರೆ. ಈ ನಿಮ್ಮ ಕೀಳು ಹೇಳಿಕೆ ಅವರನ್ನು ಪೂಜಿಸುವ ಅಭಿಮಾನಿ ಮನಸ್ಸುಗಳಿಗೆ ನೋವಾಗಿದೆ. ಕೂಡಲೇ ಕ್ಷಮೆಯಾಚಿಸಿ’ ಎಂದು ಹೇಳಿದ್ದಾರೆ.
ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಅನಿರುದ್ಧ್ ಸೇರಿ ಹಲವು ಘಟಾನುಘಟಿ ಕಲಾವಿದರು ತೆಲುಗು ನಟನಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡಿಕೊಡಿಕೊಳ್ಳುವ ಮೂಲಕ ರಂಗರಾಜು ಕ್ಷಮೆಯಾಚಿಸಬೇಕೆಂದು ಸಿಡಿದೆದಿದ್ದಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಸುದೀಪ್, ‘ವಿಷ್ಣು ಅವರು ಇಲ್ಲ ಎಂದ ಮಾತ್ರಕ್ಕೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೆ ಗಂಡಸ್ತನ ಇರುತ್ತಿತ್ತು. ಸಿನಿಮಾ ಕ್ಷೇತ್ರ ಅಂದರೆ ಒಂದು ಕುಟುಂಬದ ರೀತಿ. ನಿಮ್ಮ ಈ ಮಾತನ್ನು ನಿಮ್ಮ ಚಿತ್ರರಂಗದಲ್ಲೇ ಯಾರೂ ಒಪ್ಪುವುದಿಲ್ಲ. ನಾಡಿನ ಜನರ ಆರಾಧ್ಯ ದೈವವಾಗಿರುವ ವಿಷ್ಣುವರ್ಧನ್ ನಮ್ಮ ನಡುವೆ ಇಲ್ಲದೆ ಇರಬಹುದು. ಕೋಟಿ ಕೋಟಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಇಲ್ಲಿ ಯಾರೂ ಸುಮ್ಮನೆ ಕುಳಿತಿಲ್ಲ’ ಎಂದು ಎಚ್ಚರಿಸಿದ್ದಾರೆ.