ಗೋಹತ್ಯೆ ನಿಷೇಧ ವಿಧೇಯಕಕ್ಕೆ ಜೆಡಿಎಸ್ ವಿರೋಧ: ದೇವೇಗೌಡ, ಕುಮಾರಸ್ವಾಮಿ ಸ್ಪಷ್ಟನೆ
ಬಿಜೆಪಿ ಸರ್ಕಾರ 2010ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಪ್ರಯತ್ನಿಸಿದಾಗ ಜೆಡಿಎಸ್ ವಿರೋಧಿಸಿತ್ತು. ಈ ಬಾರಿಯೂ ಬಿಜೆಪಿ ಇದನ್ನು ವಿರೋಧಿಸುತ್ತದೆ ಎಂದು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು(ಡಿ. 15): ಬಿಜೆಪಿ ಜಾರಿಗೆ ತರಲು ಹೊರಟಿರುವ ಗೋಹತ್ಯೆ ನಿಷೇಧಕ ಕಾಯ್ದೆ ಈ ಬಾರಿಯೂ ಬೆಳಕು ಕಾಣುವುದಿಲ್ಲವಾ? ವಿಧಾನಸಭೆಯಲ್ಲಿ ಅನುಮೋದನೆ ಪಡೆದ ಈ ವಿಧೇಯಕಕ್ಕೆ ವಿಧಾನಪರಿಷತ್ನಲ್ಲಿ ಒಪ್ಪಿಗೆ ಸಿಗುವುದು ಬಹುತೇಕ ಸಾಧ್ಯವಿಲ್ಲದಂತಾಗಿದೆ. ಜಾನುವಾರು ಹತ್ಯೆ ಮತ್ತು ಸಂರಕ್ಷಣೆ ಮಸೂದೆಗೆ ಜೆಡಿಎಸ್ ಪಕ್ಷ ಬಲವಾಗಿ ವಿರೋಧಿಸಿದೆ. ಈ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ಇಲ್ಲ ಎಂದು ಆ ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್ನಲ್ಲಿ ಈ ವಿಧೇಯಕಕ್ಕೆ ಅನುಮೋದನೆ ದೊರಕಬೇಕಾದರೆ ಬಿಜೆಪಿ ಜೊತೆಗೆ ಜೆಡಿಎಸ್ ಸದಸ್ಯರ ಬೆಂಬಲ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಗೋಹತ್ಯೆ ಕಾಯ್ದೆ ಬೆಳಕು ಕಾಣುವುದು ಅನುಮಾನವಾಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ಅವರು ಗೋಹತ್ಯೆ ನಿಷೇಧ ಕಾನೂನಿಗೆ ತಮ್ಮ ಪಕ್ಷದ ವಿರೋಧ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮುಂಚಿನ ಬಿಜೆಪಿ ಸರ್ಕಾರ ಇದ್ದಾಗ ಇದೇ ಕಾನೂನು ಜಾರಿಗೆ ತರಲು ಹೋಗಿದ್ದರು. ಆಗ ನಾವು ಇದನ್ನು ವಿರೋಧಿಸಿ ರಾಜ್ಯಪಾಲರಿಗೆ ಮನವಿ ಮಾಡಿದ್ದೆವು. ಈಗಲೂ ನಾವು ಇದನ್ನು ವಿರೋಧಿಸುತ್ತೇವೆ ಎಂದವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರೂ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಗೋಹತ್ಯೆ ನಿಷೇಧ ಕಾಯ್ದೆಗೆ ತಮ್ಮ ಪಕ್ಷದ ವಿರೋಧ ಇರುವುದನ್ನು ತಿಳಿಸಿದ್ದಾರೆ.
“ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ 1964ರ ಕಾಯ್ದೆ ಜಾರಿಯಲ್ಲಿದೆ. ಅದರ ಪ್ರಕಾರ ಅಕ್ರಮವಾಗಿ ಗೋಹತ್ಯೆ ಮಾಡಿದವರ ಮೇಲೆ ದಂಡ ಇತ್ಯಾದಿ ವಿಧಿಸಬಹುದು. 2010ರಲ್ಲಿ ಅಂದಿನ ಬಿಜೆಪಿ ಸರ್ಕಾರ ಹೊಸ ಮಸೂದೆ ತಂದಿತು. ಇದು ಕೆಲವೊಂದು ಸಮುದಾಯಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿತ್ತು. ಅಂದಿನ ರಾಜ್ಯಪಾಲರನ್ನು ಭೇಟಿ ಮಾಡಿ ಈ ವಿದೇಯಕಕ್ಕೆ ಅಂಗೀಕಾರ ನೀಡಬಾರದೆಂದು ಕೋರಿದೆ. ರಾಷ್ಟ್ರಪತಿಯವರನ್ನೂ ಭೇಟಿ ಆಗಿ ಈ ವಿಧೇಯಕದ ಮಾರಕ ಅಂಶಗಳನ್ನ ಮನವರಿಕೆ ಮಾಡಿಕೊಟ್ಟೆವು. ನಂತರ ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಆಗಿ ಆ ಮಸೂದೆಯನ್ನ ಹಿಂಪಡೆಯಲಾಗಿತ್ತು. ಈಗ ಬಿಜೆಪಿ ಸರ್ಕಾರ ಮತ್ತೊಮ್ಮೆ ಈ ಕಾಯ್ದೆ ತರಲು ಹೊರಟಿದೆ. ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲಕಲ್ಲೋಲ ಮಾಡಲು ಹೊರಟಿದೆ. ಈ ವಿಧೇಯಕವನ್ನು ಜಾತ್ಯತೀತ ಜನತಾ ದಳ ಸಂಪೂರ್ಣವಾಗಿ ವಿರೋಧಿಸುತ್ತದೆ” ಎಂದು ಹೆಚ್.ಡಿ. ದೇವೇಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೊನ್ನೆಮೊನ್ನೆ ರಾಜ್ಯ ಸರ್ಕಾರದ ಭೂಸುಧಾರಣಾ ಮಸೂದೆಗೆ ಪರಿಷತ್ನಲ್ಲಿ ಬೆಂಬಲ ನೀಡಿ ಜೆಡಿಎಸ್ ಅಚ್ಚರಿ ಮೂಡಿಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ವದಂತಿಗಳಿಗೆ ಎಡೆಯಾಗಿತ್ತು. ಆದರೆ, ಭೂಸುಧಾರಣೆ ವಿಧೇಯಕಕ್ಕೆ ಬೆಂಬಲ ನೀಡಿದ್ದು ವಿಷಯಾಧಾರಿತವಾಗಿ ಮಾತ್ರ. ತಮ್ಮ ಸಲಹೆಯಂತೆ ಕೆಲವೊಂದು ತಿದ್ದುಪಡಿಗಳನ್ನ ಮಾಡಿದ್ದರಿಂದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಬೆಂಬಲ ನೀಡಿದ್ದೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು. ಆದರೆ, ಗೋಹತ್ಯೆ ನಿಷೇಧ ಕಾಯ್ದೆಗೂ ಜೆಡಿಎಸ್ ಬೆಂಬಲ ಸಿಗಬಹುದು ಎಂದು ಬಿಜೆಪಿ ಅಂದಾಜಿಸಿದ್ದು ಈಗ ಸುಳ್ಳಾಗುವಂತೆ ಕಾಣುತ್ತಿದೆ. ಆದರೆ, ಪರಿಷತ್ ಸಭಾಪತಿ ವಿರುದ್ಧದ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ.
ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿರುವ ವಿಧೇಯಕ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಲವಾಗಿ ವಿರೋಧಿಸಲು ಅದರಲ್ಲಿರುವ ಅಸ್ಪಷ್ಟ ಅಂಶಗಳೇ ಕಾರಣವಾಗಿದೆ. ಗೊಡ್ಡು ದನಗಳು ಹಾಗೂ ಹಾಲು ನೀಡದ ಹಸುಗಳನ್ನ ರೈತರು ಏನು ಮಾಡಬೇಕು? ಕೋಣಗಳನ್ನ ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ನೂತನ ವಿಧೇಯಕದಲ್ಲಿ ಸ್ಪಷ್ಟ ಉತ್ತರಗಳಿಲ್ಲ. ಈ ವಿಧೇಯಕವು ರೈತರಿಗೆ ಮಾರಕವಾಗಿದೆ. ಹಾಗೆಯೇ, ಇದನ್ನು ಒಂದು ಸಮುದಾಯವನ್ನು ಗುರಿ ಮಾಡುವಂತಿದೆ ಎಂಬ ಅಸಮಾಧಾನವನ್ನು ವಿಪಕ್ಷಗಳು ವ್ಯಕ್ತಪಡಿಸಿವೆ.