ರೈತರ ಪ್ರತಿಭಟನೆಗೆ ಸ್ಪಂದಿಸದ ಸರ್ಕಾರ: ಸಿಂಘು ಗಡಿಯಲ್ಲಿ ಶೂಟ್ ಮಾಡಿಕೊಂಡು ಸಾವಿಗೆ ಶರಣಾದ ಸಿಖ್ ಧರ್ಮಗುರು

ಚಂಡೀಗಢ: ದೆಹಲಿಯಲ್ಲಿ ಗಡಿಯಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದರಿಂದ ನೊಂದ 65 ವರ್ಷದ ಸಿಖ್ ಧರ್ಮ ಗುರು ಒಬ್ಬರು ಬುಧವಾರ ಸಂಜೆ ಸಿಂಘು ಗಡಿಯಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.

ಮೂಲಗಳ ಪ್ರಕಾರ, ಹರಿಯಾಣದ ಕರ್ನಲ್ ಜಿಲ್ಲೆಯ ಬಾಬಾ ರಾಮ್ ಸಿಂಗ್ ಅವರು ಪ್ರತಿಭಟನಾ ಸ್ಥಳದಲ್ಲೇ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣವೇ ಪೊಲೀಸರು ಪಾಣಿಪತ್‌ನಲ್ಲಿರುವ ಪಾರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರೊಳಗೆ ಧರ್ಮಗುರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಮ್ ಸಿಂಗ್ ಅವರು ತಮ್ಮ ಗ್ರಾಮದ ಗುರುದ್ವಾರ ಸಾಹಿಬ್ ನಾನಕ್ಷರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು ಎನ್ನಲಾಗಿದೆ.

ರಾಮ್ ಸಿಂಗ್ ಅವರು ಸಾವಿಗೂ ಮುನ್ನ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ನೋವು ನನಗೆ ಅರ್ಥವಾಗುತ್ತೆ. ಅವರ ನೋವನ್ನು ನಾನು ಹಂಚಿಕೊಳ್ಳುತ್ತೇನೆ. ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ, ಕೇಂದ್ರ ಸರ್ಕಾರ ನ್ಯಾಯ ಒದಗಿಸುತ್ತಿಲ್ಲ. ರೈತರ ಪ್ರತಿಭಟನೆಗೆ ಹಲವರು ಅವರದ್ದೇ ರೀತಿಯಲ್ಲಿ ಬೆಂಬಲಿಸಿದ್ದಾರೆ. ಹಲವು ಕ್ರೀಡಾಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ನಾನು ಪ್ರಾಣ ತ್ಯಾಗದ ಮೂಲಕ ಈ ಪ್ರತಿಭಟನೆ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ವೇಳೆ 22 ರೈತರು ಸಾವನ್ನಪ್ಪಿದ್ದಾರೆ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ. ಸರಾಸರಿ ಪ್ರತಿ ದಿನ ಒರ್ವ ರೈತ ಸಾವನ್ನಪ್ಪುತ್ತಿದ್ದಾರೆ ಎಂದು ರೈತ ಮುಖಂಡ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *