Sonia Gandhi: 23 ರೆಬೆಲ್ ನಾಯಕರೊಂದಿಗೆ ಸೋನಿಯಾ ಗಾಂಧಿ ಇಂದು ಮಹತ್ವದ ಸಭೆ
ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರನ್ನು ಭಿನ್ನಮತೀಯರೆಂದೇ ಕರೆಯಲಾಗುತ್ತಿದೆ. ಇಂದು ಅವರೊಂದಿಗೆ ಸೋನಿಯಾ ಗಾಂಧಿ ಅವರು ಸಮಾಲೋಚನೆ ನಡೆಸಲಿದ್ದಾರೆ.
ನವದೆಹಲಿ (ಡಿ. 19): ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು “ಜಿ -23” ಎಂದು ಹೇಳಲಾಗುವ 23 ಮಂದಿ ಭಿನ್ನಮತೀಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. 2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿಯ ನಿರ್ವಾತ ಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯದದಿಂದ ಬಳಲುತ್ತಿರುವ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷರಾಗಿರುವುದರಿಂದ ಪಕ್ಷದಲ್ಲಿ ಸಕ್ರೀಯತೆ ಕಂಡುಬರುತ್ತಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಗ್ಗೆ ಗೊಂದಲ ಉಂಟಾಗಿದ್ದು ಕೂಡಲೇ ಗೊಂದಲ ಪರಿಹರಿಸಬೇಕು. ಪಕ್ಷದೊಳಗೆ ಸಾಂಸ್ಥಿಕ ಬದಲಾವಣೆ ತರಬೇಕು ಎಂಬ ಹಿನ್ನಲೆಯಲ್ಲಿ ಇತ್ತೀಚೆಗೆ 23 ಮಂದಿ ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು.
ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರನ್ನು ‘ಭಿನ್ನಮತೀಯ’ರೆಂದೇ ಕರೆಯಲಾಗುತ್ತಿದೆ. ಇಂದು ಅವರೊಂದಿಗೆ ಸೋನಿಯಾ ಗಾಂಧಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಸೋನಿಯಾ ಗಾಂಧಿ ಅವರ ದೆಹಲಿಯ ತಮ್ಮ ನಿವಾಸ 10 ಜನಪತ್ ನಲ್ಲಿ ಇಂದು ಬೆಳಿಗ್ಗೆ ಸಭೆ ಆರಂಭವಾಗಲಿದೆ.
ಈ ಸಭೆಯ ಮತ್ತೊಂದು ವಿಶೇಷ ಎಂದರೆ ಭಿನ್ನಮತೀಯರಲ್ಲದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್, ಎ.ಕೆ. ಆ್ಯಂಟನಿ, ಪಿ. ಚಿದಂಬರಂ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಕೂಡ ಇರಲಿದ್ದಾರೆ. ಕಮಲನಾಥ್ ಅವರೇ ಸೋನಿಯಾ ಗಾಂಧಿ ಮತ್ತು ಭಿನ್ನಮತೀಯ ನಾಯಕರ ನಡುವೆ ‘ಸಂಧಾನಕಾರ’ನ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಉಳಿದಂತೆ ‘G-23’ ನಾಯಕರ ಪೈಕಿ ಅಂದು ಪತ್ರಕ್ಕೆ ಸಹಿ ಹಾಕಿದ್ದ ಗುಲಾಂ ನಭಿ ಆಜಾದ್, ಆನಂದ್ ಶರ್ಮಾ, ಶಶಿ ತರೂರ್, ಭೂಪೇಂದ್ರ ಸಿಂಗ್ ಹೂಡ, ಕಪಿಲ್ ಸಿಬಾಲ್ ಮತ್ತಿತರರು ಭಾಗವಹಿಸಲಿದ್ದಾರೆ.
ಇಂದಿನ ಸಭೆಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ, ಪಕ್ಷವನ್ನು ಸಂಘಟನೆ ಮಾಡುವ ಬಗ್ಗೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಜ್ಜು ಗೊಳಿಸು ಬಗ್ಗೆ ಚರ್ಚೆ ಮಾಡಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭಿನ್ನಮತ ಶಮನಕ್ಕೆ ಆದ್ಯತೆ ನೀಡಲಾಗುತ್ತದೆ. ಒಗ್ಗಟ್ಟು ಕಾಯ್ದುಕೊಳ್ಳುವ ಬಗ್ಗೆ ಚರ್ಚೆಯಾಗಲಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬದಲಾವಣೆ ಬಗ್ಗೆ, ಅಂದರೆ ಶೀಘ್ರವೇ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸಭೆ ನಡೆಯುತ್ತಿರುವುದರ ನಡುವೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ‘ನನ್ನನ್ನೂ ಸೇರಿದಂತೆ ಶೇ. 99.9ರಷ್ಟು ನಾಯಕರು ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕೆಂದು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ. ‘ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರವಾಗಲಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ’ ಎಂದು ಕೂಡ ಹೇಳಿದ್ದಾರೆ.