Love Jihad: ಲವ್ ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯ ಬಂಧನಕ್ಕೆ ಹೈಕೋರ್ಟ್​ ತಡೆಯಾಜ್ಞೆ

Love Jihad: ನದೀಮ್ ಹರಿದ್ವಾರದಲ್ಲಿರುವ ನನ್ನ ಮನೆಗೆ ಆಗಾಗ ಬಂದು ನನ್ನ ಹೆಂಡತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ, ಆಕೆಯನ್ನು ತನ್ನತ್ತ ಸೆಳೆಯಲು ಸ್ಮಾರ್ಟ್​ ಫೋನ್ ಒಂದನ್ನು ಗಿಫ್ಟ್​ ಆಗಿ ಕೊಟ್ಟಿದ್ದಾನೆ. ಅಲ್ಲದೆ, ನನ್ನ ಹೆಂಡತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ ಎಂದು ಅಕ್ಷಯ್ ಆರೋಪಿಸಿದ್ದರು.

ಲಕ್ನೋ (ಡಿ. 19): ಲವ್ ಜಿಹಾದ್ ಕುರಿತಾದ ಪರ-ವಿರೋಧ ವಾದಗಳು ನಡೆಯುತ್ತಲೇ ಇವೆ. ಉತ್ತರ ಪ್ರದೇಶ ಸರ್ಕಾರದ ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ 32 ವರ್ಷದ ಮುಸ್ಲಿಂ ವ್ಯಕ್ತಿಯ ಬಂಧನಕ್ಕೆ ಅಲಹಾಬಾದ್ ಕೋರ್ಟ್​ ತಡೆಯಾಜ್ಞೆ ನೀಡಿದೆ. ಮತಾಂತರ ನಿಷೇಧ ಕಾಯ್ದೆಯಡಿ ನದೀಮ್ ಮತ್ತು ಸಲ್ಮಾನ್​ ವಿರುದ್ಧ ಮುಜಾಫರ್​ನಗರದಲ್ಲಿ ಅಕ್ಷಯ್ ಕುಮಾರ್ ತ್ಯಾಗಿ ಕಳೆದ ತಿಂಗಳು ದೂರು ನೀಡಿದ್ದರು. ಆದರೆ, ಆ ಇಬ್ಬರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್​ ತಡೆ ನೀಡಿದೆ. ಈ ರೀತಿ ಬಂಧನದಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೋರ್ಟ್​ ಹೇಳಿದೆ. 

ಔಷಧೀಯ ಕಂಪನಿಯೊಂದರಲ್ಲಿ ಕಾರ್ಮಿಕ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅಕ್ಷಯ್ ಕುಮಾರ್ ತ್ಯಾಗಿ ಮುಜಾಫರ್​ ನಗರದಲ್ಲಿ ಸಲ್ಮಾನ್​ ಮತ್ತು ನದೀಮ್ ವಿರುದ್ಧ ದೂರು ದಾಖಲಿಸಿದ್ದರು. ನದೀಮ್ ಹರಿದ್ವಾರದಲ್ಲಿರುವ ನನ್ನ ಮನೆಗೆ ಆಗಾಗ ಬಂದು ನನ್ನ ಹೆಂಡತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ಪ್ರೀತಿಯ ನಾಟಕವಾಡಿದ್ದಾನೆ. ಆಕೆಯನ್ನು ತನ್ನತ್ತ ಸೆಳೆಯಲು ಸ್ಮಾರ್ಟ್​ ಫೋನ್ ಒಂದನ್ನು ಗಿಫ್ಟ್​ ಆಗಿ ಕೊಟ್ಟಿದ್ದಾನೆ. ಅಲ್ಲದೆ, ನನ್ನ ಹೆಂಡತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ ಎಂದು ಅಕ್ಷಯ್ ದೂರಿನಲ್ಲಿ ವಿವರಿಸಿದ್ದರು. ಮತಾಂತರ ನಿಷೇಧ ಕಾಯ್ದೆಯಡಿ ನದೀಮ್ ವಿರುದ್ಧ ಕೇಸ್ ದಾಖಲಾಗಿತ್ತು.

ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ನದೀಮ್ ಎಫ್​ಐಆರ್​ ರದ್ದುಗೊಳಿಸುವಂತೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನಿನ್ನೆ ನಡೆಸಿದ ಅಲಹಾಬಾದ್ ಹೈಕೋರ್ಟ್​ ಪೊಲೀಸರು ಆತನ ವಿರುದ್ಧ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಮುಂದಿನ ವಿಚಾರಣೆಯವರೆಗೂ ಆತನನ್ನು ಬಂಧಿಸುವಂತಿಲ್ಲ. ನದೀಮ್ ಬಲವಂತದಿಂದ ಅಕ್ಷಯ್ ಕುಮಾರ್ ಅವರ ಹೆಂಡತಿಯನ್ನು ಮದುವೆಯಾಗಲು ಹೊರಟಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಹೈಕೋರ್ಟ್​ ಹೇಳಿದೆ.

ಅಕ್ಷಯ್ ಕುಮಾರ್ ಅವರ ಹೆಂಡತಿ ವಯಸ್ಕರಾಗಿದ್ದು, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯೋಚಿಸುವ ಸಾಮರ್ಥ್ಯವಿದೆ. ತನಗೆ ಏನು ಬೇಕೆಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವಳಿಗಿದೆ ಎಂದು ಕೂಡ ಹೈಕೋರ್ಟ್​ ಹೇಳಿದೆ.

ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್​ ಅನ್ನು ತಡೆಗಟ್ಟುವ ದೃಷ್ಟಿಯಿಂದ ಬಲವಂತದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆಯನ್ನು ಜಾರಿ ಮಾಡಿತ್ತು. ಇದೇ ರೀತಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲಿಯೂ ಈ ಕಾನೂನು ತರಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ, ಈ ಕಾನೂನಿಗೆ ಸಾಕಷ್ಟು ವಿರೋಧಗಳೂ ವ್ಯಕ್ತವಾಗಿವೆ.

ಮುಸ್ಲಿಂ ಯುವಕನನ್ನು ಮದುವೆಯಾಗಿ, ಗರ್ಭಿಣಿಯಾಗಿದ್ದ ಯುವತಿಯನ್ನು ಮೊರಾದಾಬಾದ್​ನಲ್ಲಿ ಇತ್ತೀಚೆಗೆ ಪೊಲೀಸರು ವಶಕ್ಕೆ ಪಡೆದಿದ್ದರು. 5 ತಿಂಗಳಿನಿಂದ ಒಟ್ಟಿಗೇ ಇದ್ದ ದಂಪತಿಯನ್ನು ಲವ್ ಜಿಹಾದ್ ಆರೋಪದಲ್ಲಿ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಹಿಂದೂ ಹುಡುಗಿಯ ಧರ್ಮವನ್ನು ಬದಲಾಯಿಸಿ, ಆಕೆಯನ್ನು ನಿಖಾ ಮಾಡಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಪೊಲೀಸರು ಬಂಧಿಸಿದ ಕಾರಣ ಆತಂಕಕ್ಕೊಳಗಾದ ಆ ಯುವತಿಗೆ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಿದ ಮೇಲೆ ಆಕೆಗೆ ಗರ್ಭಪಾತವಾಗಿತ್ತು.

ಈ ಪ್ರಕರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಮೊರಾದಾಬಾದ್​ನ ಸಿಜೆಎಂ ಕೋರ್ಟ್​ ಆಕೆಯನ್ನು ವಾಪಾಸ್​ ಗಂಡನ ಮನೆಗೆ ಕಳುಹಿಸುವಂತೆ ಸೂಚಿಸಿತ್ತು. ಮುಸ್ಲಿಂ ಯುವಕರು ಬಲವಂತದಿಂದ ಹಿಂದೂ ಯುವತಿಯರನ್ನು ಮದುವೆಯಾಗಿ, ಮತಾಂತರಗೊಳಿಸುತ್ತಿದ್ದಾರೆ ಎಂದು ಬಲಪಂಥೀಯ ಸಮುದಾಯಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಕಾನೂನು ತರಲು ಹಲವು ಸರ್ಕಾರಗಳು ಮುಂದಾಗಿದ್ದವು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *