Wistron Violence – ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರನ್ನ ಜೀತದಾಳುಗಳಂತೆ ಬಳಕೆ: ಶ್ರೀರಾಮ ರೆಡ್ಡಿ

Wistron Violence – ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರನ್ನ ಜೀತದಾಳುಗಳಂತೆ ಬಳಕೆ: ಶ್ರೀರಾಮ ರೆಡ್ಡಿ

ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರನ್ನು 12 ಗಂಟೆ ಕಾಲ ಹೇಗೆ ದುಡಿಸಿಕೊಳ್ಳುತ್ತಿದ್ದಾರೆ? ಇದಕ್ಕೆ ಯಾರು ಹೊಣೆ? ಸರ್ಕಾರ ಕಾರ್ಮಿಕರ ಹಿತ ಕಾಪಾಡುತ್ತಿದೆಯಾ? ಎಂದು ಕಾರ್ಮಿಕಪರ ಹೋರಾಟಗಾರ ಶ್ರೀರಾಮ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ಕೋಲಾರ(ಡಿ. 19): ವಿಸ್ಟ್ರಾನ್ ಕಂಪನಿಯಲ್ಲಿ ಕಳೆದ ವಾರ ನಡೆದ ಕಾರ್ಮಿಕರ ಗಲಾಟೆಗೆ ಕಂಪನಿಯೇ ಹೊಣೆ ಎಂದು ಹಿರಿಯ ಕಾರ್ಮಿಕ ಹೋರಾಟಗಾರ ಶ್ರೀರಾಮ ರೆಡ್ಡಿ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಜಿವಿ ಶ್ರೀರಾಮರೆಡ್ಡಿ, ಇಂತಹ ದಾಳಿಗಳಿಗೆ  ಕಂಪನಿಯಲ್ಲಿನ ಲೋಪದೋಷಗಳೇ ಕಾರಣವಾಗಿದೆ. ಕಂಪನಿಯಲ್ಲಿ  ಕಾರ್ಮಿಕರನ್ನ ಗುಲಾಮರಂತೆ, ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು. ಒಂದೇ ಸಲ ಕಾರ್ಮಿಕರ ಆಕ್ರೋಶ ಸ್ಪೋಟವಾಗಿ ದೊಡ್ಡ ಮಟ್ಟದಲ್ಲಿ ದಾಳಿ ನಡೆದಿದೆ. ಇದರಲ್ಲಿ ಚೀನಾ ಸೇರಿದಂತೆ ಯಾವುದೇ ಹೊರಗಿನ ದೇಶದವರ ಕೈವಾಡ ಇಲ್ಲ. ಕಂಪನಿ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯೇ ದಾಂದಲೆಗೆ ಕಾರಣ ಎಂದು ದೂರಿದರು.

ಜಿಲ್ಲಾ ಕಾರ್ಮಿಕ ಇಲಾಖೆಯು ಈ ಲೋಪದೋಷಗಳನ್ನ ಒಪ್ಪಿಕೊಂಡಿದೆ. 12 ಗಂಟೆಗಳ ಕಾಲ ಒಬ್ಬ ಕಾರ್ಮಿಕನನ್ನ ಹೇಗೆ ದುಡಿಸಿಕೊಳ್ತಿದ್ದಾರೆ? ಇದಕ್ಕೆ ಯಾರು ಉತ್ತರ ಕೊಡುವುದು? ಸರ್ಕಾರ ಕಾರ್ಮಿಕರ ಹಿತ ಕಾಪಾಡುತ್ತಿದಿಯಾ? ಎಂದು ಪ್ರಶ್ನಿಸಿದ ಅವರು, ಘಟನೆಯ ಸಂಬಂದ ಕೋಲಾರದ ಸಂಸದ ಎಸ್ ಮುನಿಸ್ವಾಮಿ ವಿನಾಕಾರಣ ಎಸ್​ಎಫ್​ಐ ಸಂಘಟನೆ ವಿರುದ್ದ ಆರೋಪ ಮಾಡೋದು ಬಿಡಬೇಕು. ಅದೊಂದು ವಿದ್ಯಾರ್ಥಿ ಸಂಘಟನೆ. ಅವರ ಮೇಲೆ ಅಂತಹ ಆರೋಪಗಳು ಬೇಡ ಎಂದು ಆಗ್ರಹಿಸಿದರು

ದೇಶದಲ್ಲಿ ಯಾವುದೇ ಹೋರಾಟಗಳು ನಡೆದರೂ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಏನಾದರು ಒಂದು ಹಸರು ಇಟ್ಟು ಆ ಹೋರಾಟವನ್ನು ಹೀಗಳೆದು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿಯವರ ಮೂಗಿನ ಕೆಳಗೆಯೇ  ದೆಹಲಿಯಲ್ಲಿ ಸಾಕಷ್ಟು ರೈತಪರ ಸಂಘಟನೆಗಳು ಹೋರಾಟ ನಡೆಯುತ್ತಿದ್ದರೂ ಪ್ರಧಾನಿ ಮೋದಿಯವರು ಇಲ್ಲಿವರೆಗೂ ಸ್ಪಂದಿಸಿಲ್ಲ. ಆದರೆ ವಿಸ್ಟ್ರಾನ್ ವಿಚಾರವಾಗಿ, ಸಿಎಂ ಯಡಿಯೂರಪ್ಪ ಅವರಿಗೆ ಪೋನ್ ಕರೆ ಮಾಡಿ, ಕಂಪನಿಗೆ ಅಗತ್ಯ ಭದ್ರತೆ ನೀಡುವಂತೆ ಪ್ರಧಾನಿ ಮೋದಿಯವರು ಸೂಚನೆ ನೀಡಿದ್ದಾರೆ. ಇದು ಕಾರ್ಮಿಕರಿಗೆ ಅಗೌರವ ತೋರಿದಂತೆ, ಮೋದಿಯವರು ಬಂಡವಾಳ ಹೂಡಿಕೆದಾರರ ಪರವಿದ್ದಾರೋ, ದುಡಿಯುವ ಕಾರ್ಮಿಕರ ಪರವಾಗಿ ಇದ್ದಾರೋ ಅದನ್ನ ಸ್ಪಷ್ಟಪಡಿಸಲಿ ಎಂದು‌ ಆಗ್ರಹಿಸಿದರು. ಇದೇ ವೇಳೆ‌ ವಿಸ್ಟ್ರಾನ್ ಕಂಪನಿಯಲ್ಲಿ ದಾಂದಲೆಗೆ ಸಂಬಂಧಿಸಿದಂತೆ ಕಾರ್ಮಿಕರ ವಿರುದ್ಧ ಹೂಡಿರುವ ದಾವೆಯನ್ನು ಕಾನೂನಾತ್ಮಕವಾಗಿ ಹಿಂಪಡೆಯಬೇಕು ಎಂದೂ ಆಗ್ರಹಿಸಿದರು.

ಒಟ್ಟಿನಲ್ಲಿ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂದಲೆ ಪ್ರಕರಣದಲ್ಲಿ ಪೊಲೀಸರು‌ ತನಿಖೆಯನ್ನ ಚುರುಕುಗೊಳಿಸಿದ್ಧಾರೆ. ಘಟನೆಗೆ ಕಾರಣವನ್ನ ಹುಡುಕುವುದರ‌ ಜೊತೆಗೆ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಪರಿಹಾರ ಮಾಡಲಿ ಎಂದು ಕಾರ್ಮಿಕ ಪರ ಸಂಘಟನೆಗಳು ಆಗ್ರಹಿಸಿವೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *