ರಾಯಚೂರು: ಅಧಿಕಾರಿಗಳ ಎಡವಟ್ಟಿನಿಂದಾಗಿ ಈ ಗ್ರಾಮಗಳಿಗೆ ನಡೆಯಲ್ಲ ಚುನಾವಣೆ
ರಾಯಚೂರು:(ಡಿ.20): ರಾಜ್ಯದಲ್ಲಿ ಡಿಸೆಂಬರ್ 22 ಹಾಗೂ ಡಿಸೆಂಬರ್ 27ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿವೆ. ಈಗಾಗಲೇ ಚುನಾವಣೆ ನಡೆಯುವ ಕಡೆ ಭರ್ಜರಿ ಪ್ರಚಾರ ನಡೆದಿದೆ. ಆದರೆ ದೇವದುರ್ಗಾ ತಾಲೂಕಿನ ಹೇಮನಾಳ ಹಾಗೂ ಶಾವಂತಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣೆ ಅಬ್ಬರವಿಲ್ಲ. ನಮ್ಮಲ್ಲಿಯೂ ಚುನಾವಣೆ ನಡೆಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಶಾವಂತಗೆರೆ ಹಾಗೂ ಹೇಮನಾಳ ಗ್ರಾಮ ಪಂಚಾಯತಿ ಗಳು ಅಕ್ಕ ಪಕ್ಕದ ಗ್ರಾಮ ಪಂಚಾಯತಿಗಳಾಗಿವೆ. ಈ ಎರಡು ಗ್ರಾಮ ಪಂಚಾಯತಿಗಳಿಗೆ ಈಗ ಚುನಾವಣೆ ನಡೆಸಲು ನ್ಯಾಯಾಲಯದಲ್ಲಿರುವ ಪ್ರಕರಣ ಅಡ್ಡಿಯಾಗಿದೆ.
ಕಲಬುರಗಿ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯಾರ್ಥವಾಗುವವರೆಗೂ ಚುನಾವಣೆ ನಡೆಸಲು ಆಗಲ್ಲ. ಇದರಿಂದಾಗಿ ಇಲ್ಲಿ ಈಗ ಚುನಾವಣೆ ನಡೆಯುತ್ತಿಲ್ಲ. ಇದಕ್ಕೆ ಕಾರಣ ಮದರಕಲ್ ಗ್ರಾಮವನ್ನು ಶಾವಂತಗೆರೆ ಗ್ರಾಮ ಪಂಚಾಯತಿ ಗೆ ಸೇರಿಸಿದ್ದು. ಮದರಕಲ್ ಗ್ರಾಮವು ಹೇಮನಾಳದಿಂದ ಕೇವಲ 4 ಕಿಮೀ ದೂರವಿದೆ. ಆದರೆ ಈ ಗ್ರಾಮವನ್ನು 25 ಕಿಮೀ ದೂರವಿರುವ ಶಾವಂತಗೆರೆ ಗ್ರಾಮ ಪಂಚಾಯತಿಗೆ ಸೇರಿಸಲಾಗಿದೆ. 2015ರಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುವ ಮುನ್ನ ಕ್ಷೇತ್ರ ಪುನರ್ವಿಂಗಡನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು ಹೇಮನಾಳಕ್ಕೆ ಸೇರಿಸಬೇಕಾದ ಗ್ರಾಮವನ್ನು ಶಾವಂತಗೆರೆಗೆ ಸೇರಿಸಿದ್ದಾರೆ. ಇದನ್ನು ಪ್ರಶ್ನಿಸಿ ಸ್ಥಳೀಯರು ಕಲಬುರಗಿ ಹೈಕೋರ್ಟ್ಗೆ ಹೋಗಿದ್ದಾರೆ. ನ್ಯಾಯಲಯಕ್ಕೆ ಸರಿಯಾದ ಮಾಹಿತಿ ನೀಡಲು ವಿಳಂಬವಾಗಿದ್ದರಿಂದ ಇನ್ನೂ ಈ ಪ್ರಕರಣ ಇತ್ಯರ್ಥವಾಗಿಲ್ಲ. ಇದರಿಂದಾಗಿ ಈಗ ಚುನಾವಣೆಯಿಂದ ದೂರ ಉಳಿಯಬೇಕಾಗಿದೆ.
ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 17 ಸದಸ್ಯರು, ಶಾವಂತಗೆರೆ ಗ್ರಾಮ ಪಂಚಾಯತಿಗೆ 15 ಸದಸ್ಯರ ಆಯ್ಕೆ ಮಾಡಲು ಅವಕಾಶವಿದೆ. ಹೇಮನಾಳ ಪಂಚಾಯತಿಯಲ್ಲಿ ಹೇಮನಾಳ, ಬಸವಂತಪುರ, ಅಪ್ರಾಳ, ಕೋಳೂರು, ಬೊಮ್ಮನಾಳ, ಹೊನ್ನುಟಗಿ ಹಾಗು ಕೂಡ್ಲಗಿ ಖಾನಾಪುರ ಗ್ರಾಮಗಳಿವೆ.
ಇನ್ನು, ಶಾವಂತಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾವಂತಗೆರೆ, ಹಿರೇರಾಯನಕುಂಪಿ, ಮದರಕಲ್, ಇಂಗದಾಳ ಹಾಗು ಹಂಚಿನಾಳ ಗ್ರಾಮಗಳಿವೆ. ಒಟ್ಟು ಎರಡು ಗ್ರಾಮ ಪಂಚಾಯತಿ ಸೇರಿ 32 ಸ್ಥಾನಗಳಿಗೆ ಚುನಾವಣೆ ನಡೆಯದೆ ಗ್ರಾಮಸ್ಥರು ಅಭಿವೃದ್ಧಿ ಕಾಣುತ್ತಿಲ್ಲ. ಎರಡು ಗ್ರಾಮ ಪಂಚಾಯತಿ ಗಳಿಗೆ ಕಳೆದ ಆರು ವರ್ಷಗಳಿಂದ ಚುನಾವಣೆಯಾಗಿಲ್ಲ. ಚುನಾಯಿತ ಸದಸ್ಯರಿಲ್ಲದ ಗ್ರಾಮಗಳು ಅಭಿವೃದ್ಧಿಯಿಂದ ದೂರ ಇವೆ.
ಇಲ್ಲಿ ಪಿಡಿಒಗಳದ್ದೇ ಅಧಿಕಾರ. ಒತ್ತಾಯ ಮಾಡಿ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಚುನಾಯಿತ ಸದಸ್ಯರಿಲ್ಲ. ಇದರಿಂದ ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ, ಸ್ವಚ್ಛತೆ ಇಲ್ಲ, ರಸ್ತೆಗಳು ಸಹ ಅಷ್ಟಕಷ್ಟೆ. ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರು ಚುನಾಯಿತ ಪ್ರತಿನಿಧಿಗಳು ಬೇಕೆಂದು ಕೇಳುತ್ತಿದ್ದಾರೆ. ಈ ಮಧ್ಯೆ ಮದರಕಲ್ ಒಂದು ಗ್ರಾಮದ ಸಮಸ್ಯೆಯಿಂದಾಗಿ ಎರಡು ಗ್ರಾಮ ಪಂಚಾಯತಿಯಲ್ಲಿ ಚುನಾವಣೆ ಇಲ್ಲ.
ಜಿಲ್ಲಾಡಳಿತ ಇಲ್ಲಿಯ ನ್ಯಾಯಲಯದ ಪ್ರಕರಣವನ್ನು ಬಗೆಹರಿಸಲು ನ್ಯಾಯಲಯಕ್ಕೆ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಪ್ರಕರಣ ಇತ್ಯರ್ಥವಾಗಿಲ್ಲ. ಜಿಲ್ಲಾಧಿಕಾರಿಗಳು ಮದರಕಲ್ ಗ್ರಾಮವನ್ನು ಹೊರತುಪಡಿಸಿ ಚುನಾವಣೆ ನಡೆಸಲು ನ್ಯಾಯಾಲಯದಿಂದ ಪರವಾನಿಗೆ ಪಡೆಯಬಹುದಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ, ಇಲ್ಲವೇ ಬೇಗನೆ ಈ ಪ್ರಕರಣವನ್ನು ಇತ್ಯಾರ್ಥಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.