ಸೌರಮಂಡಲದಾಚೆಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್: ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ!

ವಾಷಿಂಗ್ಟನ್: ಸೌರಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್’ವೊಂದು ಬರುತ್ತಿರುವುದನ್ನು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದ್ದು, ಈ ಬೆಳವಣಿಗೆಯು ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗುವಂತೆ ಮಾಡಿದೆ.

ನೆದರ್ಲೆಂಡ್’ನಲ್ಲಿರುವ ಲೋ ಫ್ರೀಕ್ವೆನ್ಸಿ ಅರ್ರೆ ಎಂಬ ರೇಡಿಯೋ ಟೆಲಿಸ್ಕೋಪ್ ಬಳಸಿ ಟೌ ಬೂಟ್ಸ್ ಎಂಬ ನಕ್ಷತ್ರ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಮತ್ತೊಂದೆಡೆ ಈ ರೇಡಿಯೋ ಸಿಗ್ನಲ್ ನ ಮೂಲ 51 ಜ್ಯೋತಿರ್ವರ್ಷಗಳಷ್ಟು ದೂರವಿದೆ ಎಂದು ಅಂದಾಜಿಸಲಾಗುತ್ತಿದೆ.

ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಬೇರೆಂದು ಕಡೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ಹೇಳಿದ್ದರು. ಆದರೆ, ಖಗೋಳಶಾಸ್ತ್ರ ಹಾಗೂ ಭೌತಶಾಸ್ತ್ರ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ಈ ರೇಡಿಯೋ ಸಿಗ್ನಲ್ ಬರುತ್ತಿರುವುದು ಸೌರ ಮಂಡಲದಾಚೆ ಇರುವ ಟೌ ಬೂಟ್ಸ್ ಎಂಬ ವ್ಯವಸ್ಥೆಯಿಂದ ಎಂದು ಹೇಳಲಾಗಿದೆ.

ಖಗೋಳಶಾಸ್ತ್ರಜ್ಞರು ಹೇಳುವ ಪ್ರಕಾರ, ಇಂತಹ ತರಂಗಗಳು ಕಾಣಿಸುವುದು ಅತೀ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. ಆದರೆ, ಈ ತರಂಗಗಳು ಪ್ರಕೃತಿ ಸಹಜವಾಗಿ ಮೂಡುತ್ತಿರುವುದೋ ಅಥವಾ ಯಾವುದಾದರೂ ಜೀವಿಯ ಹಸ್ತಕ್ಷೇಪದಿಂದ ಆಗುತ್ತಿರುವುದೋ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ.

ಸಾಧಾರಣವಾಗಿ ಯಾವುದೇ ಆಕಾಶಕಾಯಗಳಲ್ಲಿ ಸ್ಫೋಟವಾದಗಲೂ ತರಂಗಗಳು ಹೊರಹೊಮ್ಮುವ ಸಾಧ್ಯತೆ ಇರುತ್ತದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ರೇಡಿಯೋ ಸಿಗ್ನಲ್ ಪತ್ತೆಯಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಏಲಿಯನ್ಸ್ ಅಸ್ತಿತ್ವದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಭೂಮಿಯ ಹೊರತಾಗಿ ಬೇರೆಡೆ ಜೀವಿಗಳು ನೆಲೆಸಿರುವ ಕುರಿತು ನಡೆಯುತ್ತಿರುವ ಅಧ್ಯಯನ ಇಂದು ನಿನ್ನೆಯದಲ್ಲ. 1897ರಲ್ಲಿ ಅಮೆರಿಕಾದ ನಿಕೋಲಾ ಟೆಸ್ಲಾ ಎನ್ನುವವರು ಮಂಗಳ ಗ್ರಹದಿಂದ ರೇಡಿಯೋ ತರಂಗಗಳು ಹೊಮ್ಮುತ್ತಿರುವುದಾಗಿ ವಾದಿಸಿದ್ದರು. ಅಲ್ಲಿ ಜೀವಿಗಳು ಇರಬಹುದು ಎಂದು ಅಂದಾಜಿಸಲಾಗಿತ್ತಾದರೂ ಮಂಗಳ ಗ್ರಹದ ಮೇಲೆ ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ಅಲ್ಲಿ ಜೀವಿಗಳು ನೆಲೆಸಿಲ್ಲ ಎನ್ನುವುದು ಗೊತ್ತಾಗಿದೆ.

ಅಂತೆಯೇ, 1967, 1977, 2003ನೇ ಇಸವಿಯಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ಮಹತ್ತರ ಅಧ್ಯಯನಗಳು ನಡೆದಿವೆ. ಆದರೆ, ಇದುವರೆಗಿನ ಯಾವ ಅಧ್ಯಯನದಲ್ಲೂ ಏಲಿಯನ್​ ಅಸ್ತಿತ್ವದ ಕುರಿತಾಗಿ ನಿಖರ ಮಾಹಿತಿ ಸಿಕ್ಕಿಲ್ಲ.

ಪ್ರಪಂಚದಲ್ಲಿ ಏಲಿಯನ್ ಗಳ ಅಸ್ತಿತ್ವ ಇದೆಯೇ? ಈ ಏಲಿಯನ್ ಗಳು ಬೇರೊಂದು ಗ್ರಹದ ಮೇಲೆ ವಾಸಿಸುತ್ತವೆಯೇ? ವಿಜ್ಞಾನಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರು ಇಂತಹ ಹಲವು ಪ್ರಶ್ನೆಗಳ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸೌರಮಂಡಲದಾಚೆಯಿಂದ ರೇಡಿಯೋ ಸಿಗ್ನಲ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಈ ಆಯಾಮದಲ್ಲೂ ಸಂಶೋಧನೆಗಳನ್ನು ಆರಂಭಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *