Farmers Protest: ದೆಹಲಿ ಗಡಿಯಲ್ಲಿ ರೈತರಿಂದ ಉಪವಾಸ ಸತ್ಯಾಗ್ರಹ; ಮತ್ತೆ ಮಾತುಕತೆಗೆ ಆಹ್ವಾನಿಸಿದ ಕೇಂದ್ರ ಸರ್ಕಾರ

Delhi Farmers Protest: ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ ಮಾಡಿರುವ ರೈತರು, ಇಂದಿನಿಂದ ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದಾರೆ‌.‌ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರ ಮನವೊಲಿಸಲು ಸಫಲರಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಮತ್ತೊಮ್ಮೆ ಮಾತುಕತೆಗೆ ಕರೆದಿದೆ‌.

ನವದೆಹಲಿ, (ಡಿ. 21): ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಕೇಂದ್ರ ಸರ್ಕಾರ ರೈತ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್​ವಾಲ್, ರೈತ ಸಂಘಟನೆಗಳ ಪ್ರತಿನಿಧಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರೊಂದಿಗೆ ಮಾತನಾಡಲು ಬಯಸಿದೆ. ರೈತ ಸಂಘಟನೆಗಳ ಪ್ರತಿನಿಧಿಗಳು ಸೂಕ್ತ ದಿನಾಂಕವನ್ನು ತಿಳಿಸಿ ಮಾತುಕತೆಗೆ ಬರಬೇಕೆಂದು ಕೇಳಿಕೊಂಡಿದ್ದಾರೆ.

ಈಗಾಗಲೇ ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಾಣಿಜ್ಯ ವ್ಯವಹಾರಗಳ ಸಂಪುಟ ದರ್ಜೆಯ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆಯ ಸಚಿವ ಸೋಮಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ‌ ನಡುವೆ 5 ಸಭೆಗಳು ನಡೆದಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತ ಸಂಘಟನೆಗಳ 13  ಪ್ರತಿನಿಧಿಗಳೊಂದಿಗೆ ಒಮ್ಮೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಮತ್ತೊಮ್ಮೆ ಮಾತುಕತೆಗೆ ಕರೆದಿದೆ‌.

ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದುವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ, ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

ಹೀಗೆ ಪರಸ್ಪರ ಒಮ್ಮತ ಮೂಡದೇ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಅಧಿಕೃತವಾಗಿ ಹಾಗೂ ಅನೌಪಚಾರಿಕವಾಗಿ ನಡೆಸಿದ ಮಾತುಕತೆಗಳು ವಿಫಲವಾಗಿವೆ. ರೈತರು ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಶಾಂತವಾಗಿ ನಡೆಸಿದ್ದರೂ ಕೇಂದ್ರ ಸರ್ಕಾರ ತನ್ನ ಹಠಮಾರಿತನದಿಂದ ಹಿಂದೆ ಸರಿದಿಲ್ಲ. ಇದರಿಂದ ರೈತ ಸಂಘಟನೆಗಳು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿವೆ.

ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ ಮಾಡಿರುವ ರೈತರು, ಇಂದಿನಿಂದ ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದಾರೆ‌.‌ ಇಂದು 11 ಜನರ ತಂಡವು 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲಿದೆ. ನಂತರ ಮತ್ತೆ 11 ಜನ ತಂಡ ಮತ್ತೆ 24 ಗಂಟೆ ಉಪವಾಸ ಸತ್ಯಾಗ್ರಹ ನಡೆಸಲಿದೆ. ಹೀಗೆ ‘ರಿಲೇ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ‌ಇದಲ್ಲದೆ ಡಿಸೆಂಬರ್ 23ರಂದು ‘ಕಿಸಾನ್ ದಿವಾಸ್’ ಆಚರಿಸಲು ತೀರ್ಮಾನ ಮಾಡಲಾಗಿದೆ. ಅಂದು “ಒಂದು ದಿನ ಊಟ ತ್ಯಜಿಸಬೇಕು” ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.‌ಜೊತೆಗೆ ಡಿಸೆಂಬರ್ 25 ರಿಂದ 27ರವರೆಗೆ ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರೈತರು ಅವಕಾಶ ನೀಡುವುದಿಲ್ಲ ಎಂದು ಘೋಷಿಸಲಾಗಿದೆ. ಅಂತಿಮವಾಗಿ ಡಿಸೆಂಬರ್ 27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವಾಗ ತಟ್ಟೆ ಬಾರಿಸಿ ಆ ಮೂಲಕ ಕೇಂದ್ರದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವಂತೆ ಭಾರತೀಯ ಕಿಸಾನ್ ಯೂನಿಯನ್ ಕರೆ ಕೊಟ್ಟಿದೆ.

ಹೀಗೆ ರೈತರು ಹಂತ ಹಂತವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿರುವುದರಿಂದ ಆತಂಕಗೊಂಡಿರುವ ಕೇಂದ್ರ ಸರ್ಕಾರ ಈಗ ರೈತರನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿದೆ. ಕೇಂದ್ರ ಸರ್ಕಾರದಿಂದ ‘Yes or No’ ಉತ್ತರ ಬೇಕು ಎಂದು ಪಟ್ಟು ಹಿಡಿದಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮಾತುಕತೆಯ ಪ್ರಸ್ತಾವಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಕಾದು ನೋಡಬೇಕಾಗಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಾಗದಲ್ಲಿ ಇಂದು ರೈತ ಸಂಘಟನೆಗಳು ಸಭೆ ಸೇರಿ ಚರ್ಚೆ ನಡೆಸುವ ಸಾಧ್ಯತೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *