ಭಾರತದಲ್ಲಿ ಜನವರಿಯಿಂದ ಕೊರೋನಾ ಲಸಿಕೆ ನೀಡುವ ಸಾಧ್ಯತೆ ಇದೆ; ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ

ದೇಶದ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಸ್ಥಳೀಯ ಲಸಿಕೆಗಾಗಿ ಕೆಲಸ ಮಾಡಿದ್ದಾರೆ ಮತ್ತು ಮುಂದಿನ ಆರರಿಂದ ಏಳು ತಿಂಗಳಲ್ಲಿ ಭಾರತವು ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭರವಸೆ ನೀಡಿದ್ದಾರೆ.

ನವದೆಹಲಿ: ಭಾರತದಲ್ಲಿ ಜನವರಿಯಲ್ಲಿ COVID-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ನೀಡುವ ಕೆಲಸ ಪ್ರಾರಂಭಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ಜನವರಿ ತಿಂಗಳ ಯಾವುದೇ ಸಮಯದಲ್ಲಿ ಭಾರತದ ಜನರಿಗೆ ಕೊರೋನಾ ಲಸಿಕೆ ಸಿಗುವ ಸಾಧ್ಯತೆ ಇದೆ. ಈ ವೇಳೆಗಾಗಲೆ ಲಸಿಕೆ ನೀಡುವ ಸ್ಥಿತಿಗೆ ಭಾರತ ಸಿದ್ಧವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವೇ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ತುರ್ತು ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ಲಸಿಕೆಗಳನ್ನು ಸಂಬಂಧ ಪಟ್ಟ ಔಷಧೀಯ ಇಲಾಖೆ ವಿಶ್ಲೇಷಣೆ ನಡೆಸುತ್ತಿದೆ”  ಎಂದು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಈವರೆಗೆ 1 ಕೋಟಿಗೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇನ್ನೂ ಕನಿಷ್ಟ 1.45 ಲಕ್ಷ ಜನ ಮೃತಪಟ್ಟಿದ್ದಾರೆ ಎಂಬುದು ಉಲ್ಲೇಖಾರ್ಹ.

ಇದೇ ಸಂದರ್ಭದಲ್ಲಿ ಕೊರೋನಾ ಲಸಿಕೆ ಸಂಶೋಧನೆ ಬಗ್ಗೆಯೂ ಮಾತನಾಡಿರುವ ಹರ್ಷವರ್ಧನ್, “COVID-19 ಲಸಿಕೆ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಭಾರತವು ಯಾವುದೇ ದೇಶಕ್ಕಿಂತ ಕಡಿಮೆಯಿಲ್ಲ. ನಮ್ಮ ಆದ್ಯತೆಯು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವಾಗಿದೆ. ಅದರ ಬಗ್ಗೆ ನಾವು ಯಾವುದೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನಮ್ಮ ನಿಯಂತ್ರಕರು ಅವುಗಳನ್ನು ಗಂಭೀರತೆಯಿಂದ ವಿಶ್ಲೇಷಿಸುತ್ತಿದ್ದಾರೆ.

ದೇಶದ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಸ್ಥಳೀಯ ಲಸಿಕೆಗಾಗಿ ಕೆಲಸ ಮಾಡಿದ್ದಾರೆ ಮತ್ತು ಮುಂದಿನ ಆರರಿಂದ ಏಳು ತಿಂಗಳಲ್ಲಿ ಭಾರತವು ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ” ಎಂದು ಭರವಸೆ ನೀಡಿದ್ದಾರೆ.

“ನಮ್ಮ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೊರೋನಾ ವೈರಸ್​ನ ಜೀನೋಮ್ ಅನುಕ್ರಮ ಮತ್ತು ಪ್ರತ್ಯೇಕತೆಯ ಮೂಲಕ ಲಸಿಕೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಮತ್ತು ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. 6-7 ತಿಂಗಳಲ್ಲಿ, ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದು ನೀಡುವುದು ಖಚಿತ” ಎಂದು ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಕೋವಿಶೀಲ್ಡ್, ಕೊವಾಕ್ಸಿನ್, ಜೈಕೋವ್-ಡಿ, ಸ್ಪುಟ್ನಿಕ್ ವಿ, ಎನ್ವಿಎಕ್ಸ್-ಕೋವಿ 2373 ಮತ್ತು ಪುನರ್ಸಂಯೋಜಕ ಪ್ರೋಟೀನ್ ಆಂಟಿಜೆನ್ ಆಧಾರಿತ ಲಸಿಕೆ ಸೇರಿದಂತೆ ಭಾರತದಲ್ಲಿ ಒಟಟ್ಟು ಆರು ಲಸಿಕೆ ತಯಾರಕ ಕಂಪನಿಗಳು ವಿವಿಧ ಕ್ಲಿನಿಕಲ್ ಪ್ರಯೋಗ ಹಂತಗಳಲ್ಲಿವೆ.

ಇದಲ್ಲದೆ, ಮೂರು ಕೋವಿಡ್-19 ಲಸಿಕೆ ಕಂಪೆನಿಗಳು ಪೂರ್ವ-ಕ್ಲಿನಿಕಲ್ ಹಂತದಲ್ಲಿದ್ದು, ಒಬ್ಬರು ಅಭಿವೃದ್ಧಿಯ ಪೂರ್ವ ಹಂತದಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *