Suresh Raina: ಮುಂಬೈನಲ್ಲಿ ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅರೆಸ್ಟ್
ಪೊಲೀಸರು ಇಲ್ಲಿಗೆ ರೈಡ್ ಮಾಡಿದ್ದು ಸುರೇಶ್ ರೈನಾ, ಖ್ಯಾತ ಗಾಯಕ ಗುರು ರಾಂಧವ ಸೇರಿದಂತೆ ಒಟ್ಟು 34 ಜನರನ್ನು ನಿನ್ನೆ ತಡ ರಾತ್ರಿ ಬಂಧಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದನ್ನು ಅರಿತ ಪೊಲೀಸರು ಇಲ್ಲಿಗೆ ರೈಡ್ ಮಾಡಿದ್ದು ಸುರೇಶ್ ರೈನಾ, ಖ್ಯಾತ ಗಾಯಕ ಗುರು ರಾಂಧವ ಸೇರಿದಂತೆ ಒಟ್ಟು 34 ಜನರನ್ನು ನಿನ್ನೆ ತಡ ರಾತ್ರಿ ಬಂಧಿಸಿದ್ದಾರೆ. ಸದ್ಯ ಸುರೇಶ್ ರೈನಾ ಜಾಮೀನಿನಲ್ಲಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಬಂಧಿಸಿರುವ 34 ಜನರಲ್ಲಿ ಏಳು ಜನ ಕ್ಲಬ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಎನ್ನಲಾಗಿದೆ. ಈ ಬಗ್ಗೆ ಎಸ್ಆರ್ ಪಿ ಸಹಾರ್ ಪೊಲೀಸರು ಖಚಿತ ಮಾಹಿತಿ ನೀಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಸಮೀಪದ ಡ್ರಾಗನ್ ಫ್ಲೈ ಕ್ಷಬ್ ಮೇಲೆ ಮಂಗಳವಾರ ನಸುಕಿನ 2.30ರ ವೇಳೆ ಈ ದಾಳಿ ನಡೆದಿದೆ. ಕ್ಲಬ್‌ನಲ್ಲಿನ ಏಳು ಸಿಬ್ಬಂದಿ ಸೇರಿದಂತೆ ಅಲ್ಲಿದ್ದವರನ್ನು ಬಂಧಿಸಲಾಗಿದೆ. ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗುರು ರಾಂಧವ ಸೇರಿದಂತೆ ಅನೇಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ದಾಳಿ ನಡೆದಿದೆ.
ಸುರೇಶ್ ರೈನಾ ಮತ್ತು ಇತರರು ಸೇರಿದಂತೆ 34 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರ ಅಡಿ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಡ್ರಾಗನ್ ಫ್ಲೈ ಕ್ಲಬ್‌ನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಕ್ಲಬ್ ನಡೆಸಲು ನೀಡಲಾಗಿದ್ದ ಸಮಯದ ಗಡುವನ್ನು ಮೀರಿ ತೆರೆಯಲಾಗಿತ್ತು ಎಂದು ಸಹಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಸದ್ಯ ದೇಶೀಯ ಕ್ರಿಕೆಟ್ಗೆ ಅಣಿಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಯದ್ ಮುಷ್ತಾಕ್ ಅಲಿ ಟ್ರೋಫಿ ಸೀಮಿತ ಓವರ್ಗಳ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.
ತಮ್ಮ ಉತ್ತರ ಪ್ರದೇಶ ರಾಜ್ಯ ತಂಡದ ಪರವಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದಕ್ಕಾಗಿ ಕೆಲ ದಿನಗಳಿಂದ ಫಿಟ್ನೆಸ್ಗಾಗಿ ದೈಹಿಕ ಕಸರತ್ತು ನಡೆಸುತ್ತಿದ್ದಾರೆ. ನೆಟ್ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ಅವರು ಇದರ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ಇದೇ ಆಗಸ್ಟ್ ತಿಂಗಳಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಕೆಲ ವರ್ಷಗಳ ಕಾಲ ಅವರು ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲಿದ್ದಾರೆ. ಯುಎಇಯಲ್ಲಿ ನಡೆದ ಈ ಋತುವಿನ ಐಪಿಎಲ್ನಲ್ಲಿ ವೈಯಕ್ತಿಕ ಕಾರಣದಿಂದ ಆಡದ ಅವರು ಮುಂದಿನ ವರ್ಷದ ಐಪಿಎಲ್ನಲ್ಲಿ ಲಭ್ಯ ಇರಲಿದ್ದಾರೆ.ಇನ್ನಷ್ಟು ಮಾಹಿತಿ ನಿರೀಕ್ಷಿಸಿ…