ಮೊದಲ ಹಂತದ ಗ್ರಾ. ಪಂ ಚುನಾವಣೆ: ಕೆಲವೆಡೆ ಘರ್ಷಣೆ, ವಾಗ್ವಾದದ ಹೊರತಾಗಿಯೂ ಬಹುತೇಕ ಶಾಂತಿಯುತ ಮತದಾನ
ಮತದಾನದ ಕೊನೆಯ ಅವಧಿಯನ್ನು ಕೊರೋನಾ ಸೋಂಕಿತರಿಗೆ ನಿಗದಿ ಮಾಡಿದ ಹಿನ್ನಲೆ ಹಲವೆಡೆ ಸೋಂಕಿತರು ಮತದಾನದಲ್ಲಿ ಭಾಗಿಯಾದರು.
ಬೆಂಗಳೂರು (ಡಿ. 22): ಕೊರೋನಾ ಆತಂಕದ ನಡುವೆಯೂ ಇಂದು ರಾಜ್ಯದ 117 ತಾಲೂಕಿನಲ್ಲಿ ಗ್ರಾಮ ಪಂಚಾಯತಿಯ ಮೊದಲ ಹಂತದ ಮತದಾನ ಕಾರ್ಯ ನಡೆದಿದೆ. ಮತದಾರರು ಕೂಡ ಸಾಕಷ್ಟು ಉತ್ಸಾಹದಲ್ಲಿ ಬಂದು ಮತದಾನದಲ್ಲಿ ತೊಡಗಿದರು. ಬೆಳಗ್ಗೆ ಮಂದಗತಿಯಾಗಿದ್ದ ಮತದಾನ, ಮಧ್ಯಾಹ್ನ ಚುರುಕು ಪಡೆದು, ಸಂಜೆ ಹೊತ್ತಿಗೆ ಬಿರುಸಿನ ಮತದಾನ ಎಲ್ಲೆಡೆ ನಡೆದಿದೆ. ಕಲಬುರ್ಗಿಯ ಕಮಲಾಪುರದಲ್ಲಿ ಮತಚಿಹ್ನೆ ಬದಲಾದ ಹಿನ್ನಲೆ ಕೆಲಕಾಲ ಮತದಾನ ಸ್ಥಗಿತಗೊಂಡಿತು. ರಾಯಚೂರಿನ ಸಿರವಾರದ ಗಣದಿನ್ನಿಯಲ್ಲಿ ಮತಪತ್ರದಲ್ಲಿ ದೋಷ ಉಂಟಾಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತು. ರಾಯಚೂರಿನ ತುಪ್ಪದೂರು ಹಾಗೂ ಗಣದಿನ್ನಿಯಲ್ಲೂ ಕೆಲಕಾಲ ಮತದಾನ ಸ್ಥಗಿತಗೊಂಡಿತು. ಇನ್ನು ಯಾದಗಿರಿಯ ಶಹಾಪುರದ ವನದುರ್ಗದಲ್ಲಿ ಎರಡು ಮತಗಟ್ಟೆ ಕೇಂದ್ರದಲ್ಲಿ ಬ್ಯಾಲೆಟ್ ಪೇಪರ್ ಅದಲುಬದಲು ಆದ ಪರಿಣಾಮ ಚನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು. ದಾವಣಗೆರೆಯಲ್ಲಿ ಮತಗಟ್ಟೆ ಬಳಿ ಎರಡು ಬಣಗಳ ಮಧ್ಯೆ ವಾಗ್ವಾದ ನಡೆಯಿತು.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಗ್ರಾಮದ ಆಜಾದ್ ನಗರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ 4 ಕ್ಕೂ ಹೆಚ್ಚು ಜನರಿಗೆ ಗಾಯಗೊಂಡರು. ಮತಗಟ್ಟೆ ಬಳಿ ಕಲ್ಲು ತೂರಿ ಎರಡು ಗುಂಪುಗಳ ಮಾರಾಮಾರಿ ನಡೆಸಿದರು. ಸ್ಥಳಕ್ಕೆ ಭರಮಸಾಗರ ಪೊಲೀಸರು, ಎಸ್ಪಿ ರಾಧಿಕಾ, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ಗ್ರಾಮಗಳಲ್ಲಿ ಮತ ಹೊಂದಿರುವ ಅನೇಕ ನಗರವಾಸಿಗಳು ಕೂಡ ತಮ್ಮಂತಮ್ಮ ಊರಿಗೆ ತೆರಳಿ ಮತದಾನದಲ್ಲಿ ಭಾಗಿಯಾದರು. ಡಿಕೆ ಶಿವಕುಮಾರ್, ರಾಮನಾಥ ರೈ, ಎಚ್ಕೆ ಪಾಟೀಲ, ಹಿಟ್ನಾಳ್, ಸಿಎಸ್ ನಿರಂಜನ್ ಕುಮಾರ್ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮಠಾಧೀಶರು ಕೂಡ ತಮ್ಮ ಗ್ರಾಮಗಳಲ್ಲಿ ಮತಚಲಾಯಿಸಿದರು. ಮಂಡ್ಯ ಸಂಸದೆ ಸುಮಲತಾ ಇದೇ ಮೊದಲ ಬಾರಿ ಮದ್ದೂರಿನ ದೊಡ್ಡರಸಿನಕೆರೆಯ ಗ್ರಾಮ ಪಂಚಾಯತಿಯಲ್ಲಿ ಮತಚಲಾಯಿಸಿದರು.
ಮತದಾನದ ಕೊನೆಯ ಅವಧಿಯನ್ನು ಕೊರೋನಾ ಸೋಂಕಿತರಿಗೆ ನಿಗದಿ ಮಾಡಿದ ಹಿನ್ನಲೆ ಹಲವೆಡೆ ಸೋಂಕಿತರು ಮತದಾನದಲ್ಲಿ ಭಾಗಿಯಾದರು. ಮದ್ದೂರು ತಾಲೂಕಿನ ಉಪ್ಪನಕೆರೆ ಮತಗಟ್ಟೆಯಲ್ಲಿ ಸೋಂಕಿತರೊಬ್ಬರು ಪಿಪಿಇ ಕಿಟ್ ಧರಿಸಿ ತಮ್ಮ ಹಕ್ಕು ಚಲಾಯಿಸಿದರು. ಇನ್ನು ಸೋಂಕಿತರ ಮತವನ್ನು ಪ್ರತ್ಯೇಕ ಬೂತ್ನಲ್ಲಿರಿಸಿ ಸುರಕ್ಷತೆ ಕಾಯ್ದುಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ, ಯಾವಗಲ, ಕೊಲ್ಹಾರ ತಾಲೂಕಿನ ಮುಳವಾಡ, ವಿಜಯಪುರ ತಾಲೂಕಿನ ಅಲಿಯಾಬಾದ ಮತಗಟ್ಟೆಗಳಲ್ಲಿ ಪಿಪಿಇ ಕಿಟ್ ಧರಿಸಿ ಸರಕಾರಿ ಆ್ಯಂಬ್ಯೂಲನ್ಸ್ ನಲ್ಲಿ ಬಂದು ಸೋಂಕಿತರು ಹಕ್ಕು ಚಲಾಯಿಸಿರು.
ಇನ್ನು ಕೊರೋನಾ ಮುನ್ನೆಚ್ಚರಿಕೆಯೊಂದಿಗೆ ಕೆಲವು ಕಡೆ ಬಿಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾದರೆ, ಹಲವೆಡೆ ಮುನ್ನೆಚ್ಚರಿಕೆಯನ್ನು ಮರೆತು ಮತದಾನ ನಡೆಸಿದ ಘಟನೆಗಳು ವರದಿಯಾಗಿವೆ. ಹಲವೆಡೆ ಸಾಮಾಜಿಕ ಅಂತರ ಮಾಯಾವಾಗಿದ್ದ ದೃಶ್ಯ ಕಂಡು ಬಂದಿದೆ.