Bidar Weather: ಬೀದರ್​ನಲ್ಲಿ ಕನಿಷ್ಠ ತಾಪಮಾನ ದಾಖಲು : ಮತ್ತಷ್ಟು ಚಳಿ ದಟ್ಟವಾಗುವ ಸಾಧ್ಯತೆ

Bidar Weather: ಜನವರಿಯಲ್ಲಿ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್ ಒಳಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಜರು ಹೇಳಿರುವುದರಿಂದ ಜನರು ಆತಂಕದಲ್ಲಿದ್ದಾರೆ

ಬೀದರ್​(ಡಿಸೆಂಬರ್​. 24 ): ಗಡಿ ಜಿಲ್ಲೆ ಬೀದರ್ ನಲ್ಲೀಗ ಮೈಕೊರೆಯುವ ಚಳಿ ಶುರುವಾಗಿದೆ. ಮಂಗಳವಾರ ರಾಜ್ಯದಲ್ಲೇ ಅತೀ ಕಡಿಮೆ ಅಂದರೆ 5.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು, ದಿನವಿಡೀ ಚಳಿಯ ಅನುಭವ ಹೊಂದುವಂತಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬೆಳಕು ಮೂಡುತ್ತಿಲ್ಲ. ಸಂಜೆ 5:30ಗಂಟೆಗೆ ಕತ್ತಲು ಆವರಿಸುತ್ತಿದೆ. ಬರುವ ದಿನಗಳಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ. ಅತಿಯಾದ ಮೈ ಕೊರೆಯುವ ವಾತಾವರಣ ಪ್ರವಾಸಿಗರಿಗೆ ಮೋಜು ಮಸ್ತಿಯ ಸುಖಾನುಭವ ನೀಡಿದ್ದರೆ, ಕೆಲಸಕ್ಕೆ ತೆರಳುವ ಸ್ಥಳಿಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಚುಮು ಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ.

ಬೆಳಗಿನ ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಜಾಸ್ತಿಯಿರುವುದು ಸಮಸ್ಯೆ ಸೃಷ್ಟಿಸಿದೆ ಎನ್ನುವುದು ಬೀದರ್ ನಿವಾಸಿಗಳ ಅಭಿಪ್ರಾಯ.

ಇನ್ನು ಬೆಳಿಗ್ಗೆ ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತ ದೃಶ್ಯ ಎಲ್ಲೆಡೆ ಸಾಮಾನ್ಯ ಎಂಬಂತಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಳಿಯ ಪ್ರಮಾಣ ಏರಿಕೆಯಾಗಿದೆ. ಇನ್ನೂ ಆಗಾಗ ಬೀಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚಳಿಗಾಲ ಆರಂಭದಲ್ಲಿ ಅಷ್ಟೇನು ಚಳಿ ಕಂಡು ಬರಲಿಲ್ಲವಾದರೂ, ಇದೀಗ ಜಿಲ್ಲೆಯ ವಿವಿಧೆಡೆ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ.

ಇನ್ನು ಜನವರಿಯಲ್ಲಿ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್ ಒಳಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಜರು ಹೇಳಿರುವುದರಿಂದ ಜನರು ಆತಂಕದಲ್ಲಿದ್ದಾರೆ. ನದಿ, ಜಲಾಶಯ, ಹಳ್ಳ- ಕೊಳ್ಳಗಳಲ್ಲಿ ನೀರೇ ಇಲ್ಲ. ಆದರೂ, ಮೈ ನಡುಗಿಸುವ ಚಳಿ ದಾಖಲಾಗುತ್ತಿರುವುದು ವಿಶೇಷ. ಚಳಿಗಾಲ ಆರಂಭವಾದರೂ ಈವರೆಗೆ ಸ್ವೆಟ್ಟರ್‌, ಜರ್ಕಿನ್‌, ಮಫ್ಲರ್‌, ಟೋಪಿಗಳಿಗೆ ಬೇಡಿಕೆ ಇರಲಿಲ್ಲ. ಡಿಸೆಂಬರ್‌ ಆರಂಭದಿಂದ ಜನ ಸ್ವೆಟ್ಟರ್‌, ಜರ್ಕಿನ್‌, ಟೋಪಿಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಮುಂಬರುವ ಜನವರಿ ತಿಂಗಳಲ್ಲಿ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಬಸವರಾಜ ಬಿರಾದಾರ್ ಹೇಳಿರುವುದರಿಂದ ಜನರು ಆತಂಕದಲ್ಲಿದ್ದಾರೆ.

ಚಳಿಗಾಲಕ್ಕೆ ಬೀದರ್ ನಗರ ಸಂಪೂರ್ಣ ಬದಲಾಗಿ ಹೋಗಿದ್ದು, ನಸುಕಿನ ಜಾವ ಜನರು ಓಡಾಡದಂತಾಗಿದೆ. ಗಡೀ ಜಿಲ್ಲೆ ಜನರಿಗೆ ಕೆಲವೂ ಸಲ ಊಟಿಯಲ್ಲಿನ ಮಂಜಿನ ಅನುಭವ ಆಗುತ್ತಿದ್ದು, ನಗರದ ಪ್ರಕೃತಿ ಸೌಂದರ್ಯಕ್ಕೆ ಇಲ್ಲಿನ ಜನರೇ ಫಿದಾ ಆಗಿ ಹೋಗಿದ್ದಾರೆ.

ಇನ್ನೂ ಈ ಮೈಕೊರೆಯುವ ಚಳಿಯಲ್ಲಿ ಬೆಳಗಿನ ವಾತಾವರಣದಲ್ಲಿ ವಾಕಿಂಗ್ ಹೋಗುವವರು ತುಂಬಾನೆ ಖುಷಿ ಪಡುತ್ತಿದ್ರೆ, ವೃದ್ಧರು ಮಾತ್ರ ಚಳಿಗೆ ಬೆಚ್ಚಿ ಬೀಳುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *