ಇಂದು ವೈಕುಂಠ ಏಕಾದಶಿ: ಟಿಟಿಡಿ ದೇವಸ್ಥಾನದಲ್ಲಿ 10ದಿನಗಳ ಕಾಲ ಇರಲಿದೆ ವೈಕುಂಠ ದ್ವಾರ
vaikunta ekadasi: ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ ಈ ಬಾರಿ ಪ್ರವೇಶ ನಿರಾಕರಿಸಲಾಗಿದೆ. ಉಳಿದಂತೆ ಬೇರೆ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು (ಡಿ. 25): ವೈಕುಂಠ ಏಕಾದಶಿ ಅಥವಾ ಮೋಕ್ಷ ಏಕಾದಶಿ ಹಿಂದೂ ಪುರಾಣದಲ್ಲಿ ವಿಶೇಷವಾಗಿ ಪರಿಗಣಿಸಲಾಗಿದೆ. ಈ ದಿನ ವಿಷ್ಣುವನ್ನು ಉತ್ತರದ್ವಾರದಲ್ಲಿ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಧನುರ್ಮಾಸದಲ್ಲಿ ಬರುವ ಈ ಏಕಾದಶಿಯಂದು ವಿಷ್ಣುವು ಯೋಗ ನಿದ್ರೆಯಿಂದ ಏಚ್ಚರಗೊಳ್ಳುವ ದಿನ. ದಕ್ಷಿಣ ಭಾರತದಲ್ಲಿ ಈ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಅಲ್ಲದೇ ಈ ದಿನ ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ, ಆ ಮೂಲಕ ಶ್ರೀಮನ್ನಾರಾಯಣ ದರ್ಶನವನ್ನು ಭಕ್ತರು ಪಡೆಯುತ್ತರೆ. ಅದರಲ್ಲಿಯೂ ತಿರುಮಲ ತಿರುಪತಿ ದೇವಾಲಯದಲ್ಲಿ ವಿಶೇಷ. ಈ ಬಾರಿ ಕೊರೋನಾ ಹಿನ್ನೆಲೆ ಈ ವೈಕುಂಠ ಏಕಾದಶಿಯಂದು ದೇವಾಲಯಗಳಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಅಲ್ಲದೇ ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಕೊರೋನಾ ಮುನ್ನೆಚ್ಚರಿಕೆ ಇಸ್ಕಾನ್ ಗಿಲ್ಲ ಭಕ್ತರ ಪ್ರವೇಶ:
ವೈಕುಂಠ ಏಕಾದಶಿಯಂದು ಭಕ್ತರ ದಂಡು ದೇವಾಲಯಗಳಿಗೆ ಹರಿದು ಬರುತ್ತದೆ. ಈ ಸಂದರ್ಭದಲ್ಲಿ ಕೊರೋನಾ ಮುನ್ನೆಚ್ಚರಿಕೆ ಪಾಲಿಸುವುದು ಕಷ್ಟವಾದ ಹಿನ್ನಲೆ ಬೆಂಗಳೂರಿನ ಪ್ರತಿಷ್ಟಿತ ಕೆಲ ದೇಗುಲಗಳು ಭಕ್ತರಿಗೆ ಪ್ರವೇಶ ನಿಷೇಧಿಸಿದೆ. ಆದರೆ ದೇವಾಲಯಗಳಲ್ಲಿ ಎಂದಿನಂತೆ ಆಚರಣೆ ನಡೆಯಲಿದೆ. ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ ಈ ಬಾರಿ ಪ್ರವೇಶ ನಿರಾಕರಿಸಲಾಗಿದೆ. ಉಳಿದಂತೆ ಬೇರೆ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ತೀರ್ಥ ಪ್ರಸಾದ ಬದಲು ತಿರುಪತಿ ಲಡ್ಡು
ನಗರದ ವೈಯಾಲಿಕಾವಲ್ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ಭರ್ಜರಿ ತಯಾರಿ ನಡೆಸಲಾಗಿದೆ. ತಿರುಪತಿ ತಿರುಮಲದಂತೆ ಇಲ್ಲೂ ಕೂಡ 10 ದಿನಗಳ ವೈಕುಂಠ ದ್ವಾರ ತೆರೆದಿರಲು ತೀರ್ಮಾನಿಸಲಾಗಿದೆ. ನಾಳೆಯಿಂದ ಜನವರಿ 3 ರ ವರೆಗೆ ವೈಕುಂಠ ಏಕಾದಶಿ ಕಾರ್ಯಕ್ರಮ ಏರ್ಪಾಡುಮಾಡಲಾಗಿದೆ. ಗರ್ಭಿಣಿಯರು, ಅಂಗವಿಕಲರು, 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ವಿಶೇಷ ವಿಐಪಿ ಪಾಸ್ ವಿತರಣೆ ಮಾಡಲಾಗಿದ್ದು, 150ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ಆಯೋಜಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗೆ ದರ್ಶನದ ಅವಕಾಶ. ಈ ಬಾರಿ ತೀರ್ಥ ಪ್ರಸಾದ ಇರುವುದಿಲ್ಲ. ಆದರೆ, ತಿರುಪತಿ ಲಾಡು ವಿತರಣೆ ಇರಲಿದೆ