ಜನವರಿ 1ರಿಂದ ಶಾಲೆಗಳ ಆರಂಭಕ್ಕೆ ತುಮಕೂರು ಜಿಲ್ಲಾಡಳಿತ ಸಿದ್ಧ

ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಕಾರ್ಯಚಟುವಟಿಕೆಗಳ ನಿಗಾ ಇಡಲು ಪ್ರತಿ ಶಾಲೆಯಲ್ಲಿಯೂ ಮಾರ್ಗದರ್ಶಕ ಶಿಕ್ಷಕರನ್ನು ನೇಮಿಸಲಾಗುವುದು ತರಗತಿಗಳನ್ನು ಬೆಳಿಗ್ಗೆ 10 ಗಂಟೆಯಿಂದ 45 ನಿಮಿಷಗಳ ಕಾಲ 03 ಅವಧಿಗೆ ನಡೆಸಲಾಗುತ್ತದೆ. ಎಂದು ತುಮಕೂರು ಜಿಲ್ಲಾಡಳಿತ ತಿಳಿಸಿದೆ.

ತುಮಕೂರು :  ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 2021ರ ಜನವರಿ 1 ರಿಂದ 10 ಮತ್ತು 12ನೇ ತರಗತಿ ಹಾಗೂ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ. ಮಕ್ಕಳು ಮತ್ತು ಶಿಕ್ಷಕರ ಆರೋಗ್ಯದ ದೃಷ್ಠಿಯಿಂದ ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ದಿ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಎಲ್ಲಾ ಶಾಲಾ ಕಟ್ಟಡ, ಶೌಚಾಲಯ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ತರಗತಿಗೆ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ಆನ್‍ಲೈನ್ ತರಗತಿಯಲ್ಲಿಯೂ ಪಾಠ ಕೇಳಬಹುದಾಗಿದೆ. ಶಾಲೆಗೆ ಬರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು. ಶಾಲೆಯಲ್ಲಿ ಬಿಸಿಯೂಟ ನೀಡುವುದಿಲ್ಲ. ಬದಲಿಗೆ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಮನೆಗೆ ನೀಡಲಾಗುತ್ತದೆ.

ತರಗತಿಯಲ್ಲಿ 15 ವಿದ್ಯಾರ್ಥಿಗಳಂತೆ ತಂಡ ರಚಿಸಲು ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ತಿಳಿಸಲಾಗಿದೆ. ಕೋವಿಡ್-19 ನಿಯಮದನ್ವಯ ಅಂತರ ಕಾಯ್ದುಕೊಂಡು ಒಂದು ತಂಡಕ್ಕೆ ಪ್ರಥಮ ಭಾಷೆ ಬೋಧನೆ ಮಾಡಿದಲ್ಲಿ ಅದೇ ಸಮಯದಲ್ಲಿ ಮತ್ತೊಂದು ತಂಡಕ್ಕೆ ದ್ವಿತೀಯ ಭಾಷೆ ಬೋಧಿಸಲಾಗುತ್ತದೆ. ಈ ರೀತಿ ರೊಟೇಷನ್ ಆಧಾರದಲ್ಲಿ ಎಲ್ಲಾ ತಂಡಗಳಿಗೂ ಬೋಧನಾ ಪ್ರಕ್ರಿಯೆ ನಡೆಸಲಾಗುತ್ತದೆ.

ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ಸಂಖ್ಯೆಯನ್ನಾಧರಿಸಿ ಬೋಧನಾ ಕೊಠಡಿಗಳು ಕೊರತೆಯಾದಲ್ಲಿ ಗಣಕ ಯಂತ್ರ, ಪ್ರಯೋಗಾಲಯ, ಸಭಾ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ನಾಡಗೀತೆ, ರಾಷ್ಟ್ರಗೀತೆ ಇತ್ಯಾದಿ ಪ್ರಾರ್ಥನೆಗೆ ಅವಕಾಶ ನೀಡದೇ ನೇರವಾಗಿ ತರಗತಿ ಪ್ರಾರಂಭಿಸಬೇಕೆಂದು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಯೂ ತರಗತಿಗೆ ಬರುವಾಗ ಪ್ರಾರಂಭದಲ್ಲಿ ಪೋಷಕರ ಒಪ್ಪಿಗೆ ತರಬೇಕು.

ಶಾಲೆಯಲ್ಲಿಯೂ ಅಕ್ಷರ ದಾಸೋಹದ ಅಡಿಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಾರಂಭದ ದಿನದಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಹಾಗೂ  ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು  ಶಾಲೆ ಪ್ರಾರಂಭದ 3 ದಿನದೊಳಗೆ ಕೋವಿಡ್-19 ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿಯನ್ನು ಪಡೆದು ಕಡ್ಡಾಯವಾಗಿ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು.

ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಕಾರ್ಯಚಟುವಟಿಕೆಗಳ ನಿಗಾ ಇಡಲು ಪ್ರತಿ ಶಾಲೆಯಲ್ಲಿಯೂ ಮಾರ್ಗದರ್ಶಕ ಶಿಕ್ಷಕರನ್ನು ನೇಮಿಸಲಾಗುವುದು ತರಗತಿಗಳನ್ನು ಬೆಳಿಗ್ಗೆ 10 ಗಂಟೆಯಿಂದ 45 ನಿಮಿಷಗಳ ಕಾಲ 03 ಅವಧಿಗೆ ನಡೆಸಲಾಗುತ್ತದೆ. ಶಾಲೆ ಪ್ರಾರಂಭಕ್ಕೆ ಮುಂಚೆ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಮಾರ್ಗಸೂಚಿ ನೀಡಲಾಗಿದೆ ಹಾಗೂ ಎಲ್ಲಾ ಎಸ್.ಡಿ.ಎಂ.ಸಿ.ಗಳು ಮತ್ತು ಪೋಷಕರ ಸಭೆಯನ್ನು ನಡೆಸಿ ತರಗತಿಗಳು ನಡೆಯುವ ಬಗ್ಗೆ ಮಾಹಿತಿ ನೀಡಲು ಎಲ್ಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.. ತರಗತಿ ನಡೆಸುವ ಬಗ್ಗೆ  ಎಸ್.ಓ.ಪಿ. ನೀಡಲಾಗಿದೆೆ

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *