ಟಾಗೋರ್ ಬಗ್ಗೆ ಮಾತನಾಡುವ ಮೊದಲು ಅವರ ತತ್ವಶಾಸ್ತ್ರದ ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳಿ; ಮೋದಿಗೆ ಮಮತಾ ಟಾಂಗ್
ವಲಸೆ ರಾಜಕಾರಣಿಗಳು ಟಾಗೋರ್ ಮತ್ತು ಅವರ ತತ್ವಗಳ ಬಗ್ಗೆ ಮಾತನಾಡುವ ಮೊದಲು ಅವರ ತತ್ತ್ವಶಾಸ್ತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು. ಆದರೆ, ಈ ತಿಳುವಳಿಕೆ ಇಲ್ಲದೆ ಟಾಗೋರ್ ಹೆಸರನ್ನು ಉಲ್ಲೇಖಿಸಿ ಏನೇನೋ ಹೇಳುವುದು ಸರಿಯಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕೋಲ್ಕತ್ತಾ (ಡಿಸೆಂಬರ್ 24); ಪ್ರಧಾನಿ ನರೇಂದ್ರ ಮೋದಿಯಂತಹ ವಲಸೆ ರಾಜಕಾರಣಿಗಳು ರವೀಂದ್ರನಾಥ ಟಾಗೋರ್ ಅವರ ತತ್ವಗಳ ಬಗ್ಗೆ ಮಾತನಾಡುವ ಮೊದಲು ಅವರ ಇಡೀ ತತ್ವಶಾಸ್ತ್ರ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು. ಟಾಗೋರ್ ದೃಷ್ಟಿಕೋನದ ಬಗ್ಗೆ ಸ್ಪಷ್ಟತೆ ಇರಬೇಕು. ಆದರೆ, ಈ ಎರಡರ ಬಗ್ಗೆಯೂ ಕಿಂಚಿತ್ತೂ ತಿಳುವಳಿಕೆ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಯಾವ ಆಧಾರದ ಮೇಲೆ ಟಾಗೋರ್ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ಪಶ್ಚಿಮ ಬಂಗಾಳದ ಕುರಿತು ಮಾತನಾಡುವಾದ ಅವರು ಎಲ್ಲದಕ್ಕೂ ಗುಜರಾತ್ ಉದಾಹರಣೆಯನ್ನು ನೀಡುವ ಮೂಲಕ ಅವರು ಬಂಗಾಳಿಗರನ್ನು ಅವಮಾನ ಮಾಡುತ್ತಿರುವುದು ಏಕೆ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಭಾರತದಲ್ಲೇ ಆರಂಭವಾದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಪಶ್ಚಿಮ ಬಂಗಾಳದ ವಿಶ್ವ-ಭಾರತಿ ವಿಶ್ವವಿದ್ಯಾಲಯಕ್ಕೆ ಇದೆ. ಈ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, “ವಿದ್ಯಾಲಯದ ಸಂಸ್ಥಾಪಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್ ಅವರ ದೃಷ್ಟಿಕೋನ ‘ಆತ್ಮನಿರ್ಭರ ಭಾರತ’ವೇ ಆಗಿತ್ತು. ಇನ್ನೂ ಆತ್ಮನಿರ್ಭರ ಭಾರತ ಕೇವಲ ಭಾರತದ ಅಭಿವೃದ್ದಿಗೆ ಮಾತ್ರವಲ್ಲ ಇಡೀ ವಿಶ್ವದ ಅಭಿವೃದ್ಧಿಗೆ ಭಾರತದ ಹಾದಿಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, “ವಲಸೆ ರಾಜಕಾರಣಿಗಳು ಟಾಗೋರ್ ಮತ್ತು ಅವರ ತತ್ವಗಳ ಬಗ್ಗೆ ಮಾತನಾಡುವ ಮೊದಲು ಅವರ ತತ್ತ್ವಶಾಸ್ತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು. ಆದರೆ, ಈ ತಿಳುವಳಿಕೆ ಇಲ್ಲದೆ ಟಾಗೋರ್ ಹೆಸರನ್ನು ಉಲ್ಲೇಖಿಸಿ ಏನೇನೋ ಹೇಳುವುದು ಸರಿಯಲ್ಲ”ಎಂದು ಕಿಡಿಕಾರಿದ್ದಾರೆ.
ಅಲ್ಲದೆ, “ಪ್ರಧಾನಿ ಮೋದಿ ಈ ಹಿಂದೆ ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಾಗಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಪ್ರಧಾನಿ ಪ್ರಸ್ತಾಪಿಸಿದ್ದರು. ಆದರೆ, ದೇಶದ ಮೊದಲ ವಿಶ್ವವಿದ್ಯಾಲಯವಾದ ಕಲ್ಕತ್ತಾ ವಿಶ್ವವಿದ್ಯಾಲಯವನ್ನು ಅವರು ಉಲ್ಲೇಖಿಸದೆ ಇದ್ದದ್ದಕ್ಕೆ ಕಾರಣ ಏನು?” ಎಂದು ಪ್ರಶ್ನಿಸಿದ್ದಾರೆ.
“ಇನ್ನೂ ಟಾಗೋರ್ ಬಗ್ಗೆ ಮಾತನಾಡುವಾಗ ಪದೇ ಪದೇ ಗುಜರಾತ್ ಉಲ್ಲೇಖಗಳು ಏಕೆ ಬಂದವು ಎಂಬುದು ಅರ್ಥವಾಗಲಿಲ್ಲ. ಜೊತೆಗೆ ಮೋದಿ ಹೇಳಿದ ಕೆಲವು ವಿಷಯಗಳು ವಾಸ್ತವಿಕವಾಗಿ ತಪ್ಪಾಗಿವೆ. ಅಲ್ಲದೆ ಮೋದಿ ಮತ್ತು ಬಿಜೆಪಿಯು ಪಶ್ಚಿಮ ಬಂಗಾಳ ಮತ್ತು ಬಂಗಾಳಿಗಳನ್ನು ಕೆಳಮಟ್ಟದಲ್ಲಿಯೇ ಚಿತ್ರಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, “ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಟಾಗೋರ್ ಅವರ ವಿಶ್ವ ಭಾರತಿಯನ್ನು ನಾವು ಎಂದೂ ಅವಮಾನಿಸಿಲ್ಲ. ಆದರೆ, ಇಲ್ಲಿ ಕೆಲವು ಸಂಕುಚಿತ ಮನೋಭಾವದವರು ಆಯಕಟ್ಟಿನ ಜಾಗದಲ್ಲಿದ್ದು, ಟಾಗೋರ್ ಆದರ್ಶಗಳಿಗೆ ಮಾರಕವಾಗಿದ್ದಾರೆ. ಇದು ಇಡೀ ವಿಶ್ವವಿದ್ಯಾಲಯವನ್ನು ಬಂಗಾಳವನ್ನು ಕತ್ತಲೆಗೆ ನೂಕುತ್ತದೆ. ಇಂತವರ ಸ್ಥಾನಗಳು ಭದ್ರವಲ್ಲ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.