ಮೋದಿ-ದೀದಿ ಜಟಾಪಟಿಗೆ ಕಾರಣವಾಯ್ತು ಮನ್ ಕಿ ಬಾತ್ ಬಾಷಣ; ಈ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದ್ದೇನು?
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಗೆ-ರೈತರಿಗೆ ಸಹಕರಿಸುತ್ತಿಲ್ಲ ಮತ್ತು ಕೇವಲ ಕ್ಷುಲ್ಲಕ ಪ್ರಚಾರದಲ್ಲಿ ತೊಡಗಿದೆ. ಎಲ್ಲಾ ವಿಚಾರದಲ್ಲೂ ತಮ್ಮ ರಾಜಕೀಯ ಲಾಭಗಳ ಹುಡುಕಾಟದಲ್ಲಿದೆ ಎಂದು ಟ್ವೀಟ್ ಮೂಲಕ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವರವಾದ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ನವ ದೆಹಲಿ; “ಇಡೀ ದೇಶದ ರೈತರು ಪಿಎಂ-ಕಿಸಾನ್ ಯೋಜನೆಯಿಂದ ಲಾಭ ಪಡೆಯುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ತಮ್ಮ ರಾಜ್ಯದ 70 ಲಕ್ಷ ರೈತರು ಈ ಲಾಭವನ್ನು ಪಡೆಯದಂತೆ ತಡೆಯುತ್ತಿದೆ. ಈ ಯೋಜನೆ ತಮಗೆ ಸಿಗುತ್ತಿಲ್ಲ ಎಂದು ಅನೇಕ ರೈತರು ನೇರವಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರದ ಹಸ್ತಕ್ಷೇಪದ ವಿರುದ್ಧ ದೂರು ನೀಡಿದ್ದಾರೆ” ಎಂದು ಆರೋಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಶುಕ್ರವಾರ ಇಡೀ ದೇಶದಾದ್ಯಂತ ರೈತರ ದಿನಾಚರಣೆ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗಿತ್ತು. ಇದರ ಅಂಗವಾಗಿ ಮನ್ ಕಿ ಬಾತ್ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿ ಮತ್ತು ಪಶ್ಚಿಮ ಬಂಗಾಳದ ಸರ್ಕಾರವನ್ನು ಅಪಾರ ಟೀಕೆಗೆ ಒಳಪಡಿಸಿದ್ದಾರೆ.
ರೈತ ದಿನಾಚರಣೆಯ ವಿಶೇಷ ಮನ್ ಕಿ ಬಾತ್ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ರಾಜಸ್ಥಾನ, ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಗಳಲ್ಲಿ, ರೈತರು ಕೃಷಿ ಸುಧಾರಣಾ ಕಾನೂನುಗಳ ಪರವಾಗಿ ಮತ ಚಲಾಯಿಸಿದ್ದಾರೆ. ಈ ಚುನಾವಣೆಗಳಲ್ಲಿ ರೈತರ ಧ್ವನಿ ಕೇಳಿ ಬಂದಿದೆ. ಎಷ್ಟೊಂದು ಪ್ರಚಾರದ ಹೊರತಾಗಿಯೂ, ಚುನಾವಣೆ ನಡೆದಲ್ಲೆಲ್ಲಾ ರೈತರು ದೆಹಲಿ ರೈತ ಆಂದೋಲನವನ್ನು ನಡೆಸುತ್ತಿರುವವರನ್ನು [ಕೃಷಿ ಕಾನೂನುಗಳಿಗೆ ವಿರುದ್ಧವಾಗಿ] ತಿರಸ್ಕರಿಸಿರುವುದು ಸ್ಪಷ್ಟವಾಗುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಕೃಷಿ ವಲಯವನ್ನು ಉದಾರೀಕರಣಗೊಳಿಸಲು ಸರ್ಕಾರ ಹೊಸ ಕಾನೂನನ್ನು ಪರಿಚಯಿಸಿದೆ. ಆದರೆ, ಇದನ್ನು ವಿರೋಧಿಸಿ ನಡೆಯುತ್ತಿರವ ರೈತರ ಆಂದೋಲನ ರಾಜಕೀಯ ಪ್ರೇರಿತವಾದದ್ದು. ಏಕೆಂದರೆ ಎಂಎಸ್ಪಿಯನ್ನು ಕೃಷಿ ಕಾನೂನುಗಳಲ್ಲಿ ಸೇರಿಸಬೇಕೆಂಬ ಬೇಡಿಕೆಯೊಂದಿಗೆ ಮೊದಲು ಚಳುವಳಿ ಪ್ರಾರಂಭವಾಯಿತು. ಆದರೆ, ನಂತರದ ದಿನಗಳಲ್ಲಿ ರಾಜಕೀಯ ಜನರು ಈ ಚಳುವಳಿಯ ಒಳಗೆ ಜಿಗಿದರು. ಪ್ರಸ್ತುತ ಜೈಲಿನಲ್ಲಿರುವ ಹಿಂಸಾಚಾರದ ಆರೋಪ ಹೊತ್ತಿರುವ ಕೆಲವು ಜನರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದ ಜನ ನಂತರ ಟೋಲ್ ಪ್ಲಾಜಾಗಳ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದ್ದಾರೆ” ಎಂದು ಮೋದಿ ಕಿಡಿಕಾರಿದ್ದಾರೆ.
“ಜನಸಾಮಾನ್ಯರಿಂದ ತಿರಸ್ಕರಿಸಲ್ಪಟ್ಟ ಕೆಲವು ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿತಪ್ಪಿಸುತ್ತಿವೆ ಮತ್ತು ಸರ್ಕಾರ ಮತ್ತು ರೈತರ ನಡುವೆ ಮಾತುಕತೆ ನಡೆಯದಂತೆ ತಡೆಯುತ್ತಿದೆ. ರೈತರ ಪ್ರತಿಯೊಂದು ವಿಷಯದ ಬಗ್ಗೆಯೂ ಸರ್ಕಾರ ಮುಕ್ತ ಹೃದಯದಿಂದ ಮಾತನಾಡಲು ಸಿದ್ಧವಾಗಿದೆ. ಸರ್ಕಾರವು ರೈತರ ಪರವಾಗಿದೆ ಮತ್ತು ಯಾವುದೇ ರೀತಿಯ ಚರ್ಚೆಗೆ ಸಿದ್ಧವಾಗಿದೆ. ನಮ್ಮನ್ನು ವಿರೋಧಿಸುವವರಿಗೆ ನಾನು ಹೇಳಲು ಬಯಸುತ್ತೇನೆ. ಚರ್ಚೆಯು ಉತ್ತಮ ವಾದಗಳ ಮೇಲೆ ನಡೆಯುತ್ತದೆ ಮತ್ತು ಸತ್ಯಗಳನ್ನು ಆಧರಿಸಿರುತ್ತದೆ” ಎಂದು ಮೋದಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧವೂ ಹರಿಹಾಯ್ದ ಪ್ರಧಾನಿ ಮೋದಿ, “ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಯೋಜನೆಯಿಂದ 9 ಕೋಟಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಕೇಂದ್ರ ಸರ್ಕಾರದ ರೈತ ಯೋಜನೆಗಳು ಬಂಗಾಳದ ರೈತರಿಗೆ ತಲುಪದಂತೆ ಮಾಡಲಾಗುತ್ತಿದೆ. ಈ ಕುರಿತು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರೈತರು ದೂರು ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಗಳಿಗೆ ಕೆಲವೇ ಗಂಟೆಗಳಲ್ಲಿ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಪ್ರಧಾನಿಯವರು ಅರ್ಧ ಸತ್ಯಗಳೊಂದಿಗೆ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮೊದಲು ನಿಲ್ಲಿಸಬೇಕು. ಇಂದು ಪ್ರಧಾನಿ ಮೋದಿ ಅವರ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಮೋದಿಯವರು ಅದನ್ನು ಉದ್ದೇಶಿಸಿ ಮಾತನಾಡುವ ಬದಲು ಜನರನ್ನು ಅರ್ಧ-ಸತ್ಯ ಮತ್ತು ವಿಕೃತ ಸಂಗತಿಗಳೊಂದಿಗೆ ದಾರಿತಪ್ಪಿಸಲು ನಿರ್ಧರಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಗೆ ರೈತರಿಗೆ ಸಹಕರಿಸುತ್ತಿಲ್ಲ ಮತ್ತು ಕೇವಲ ಕ್ಷುಲ್ಲಕ ಪ್ರಚಾರದಲ್ಲಿ ತೊಡಗಿದೆ. ಎಲ್ಲಾ ವಿಚಾರದಲ್ಲೂ ತಮ್ಮ ರಾಜಕೀಯ ಲಾಭಗಳ ಹುಡುಕಾಟದಲ್ಲಿದೆ” ಎಂದು ಟ್ವೀಟ್ ಮೂಲಕ ವಿವರವಾದ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ದ ಇಡೀ ದೇಶದ ರೈತ ಸಮೂಹ ಕಳೆದ ಒಂದು ತಿಂಗಳಿನಿಂದ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತವಾಗಿದೆ. ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಹಿಂಪಡೆಯುವವರೆಗೆ ತಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಲ್ಲದೆ, ಸರ್ಕಾರ ಮತ್ತು ರೈತ ಮುಖಂಡರ ನಡುವೆ ಈವರೆಗೆ ನಡೆದ 6 ಸುತ್ತಿನ ಮಾತುಕತೆ ಸಹ ವಿಫಲವಾಗಿದೆ.