ಭೂಗತ ಪಾತಕಿ ಚೋಟಾ ರಾಜನ್​ ಅಂಚೆ ಚೀಟಿ ಬಿಡುಗಡೆ; ಪೇಚಿಗೆ ಸಿಲುಕಿದ ಉತ್ತರಪ್ರದೇಶ ಸರ್ಕಾರ

ಉತ್ತರಪ್ರದೇಶದ ಕಾನ್ಪುರ ಅಂಚೆ ಇಲಾಖೆ ಹೀಗೆ ಭೂಗತ ಪಾತಕಿಗಳ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ಸಾಧಕರಿಗೆ ಅಗೌರವ ತೋರಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ಭೂಗತ ಪಾತಕಿ ಚೋಟಾ ರಾಜನ್​ ಅಂಚೆ ಚೀಟಿ ಬಿಡುಗಡೆ; ಪೇಚಿಗೆ ಸಿಲುಕಿದ ಉತ್ತರಪ್ರದೇಶ ಸರ್ಕಾರ

ಚೋಟಾ ರಾಜನ್.
ಉತ್ತರಪ್ರದೇಶ; ಚೋಟಾ ರಾಜನ್ ಭಾರತದ ಭೂಗತ ಲೋಕವನ್ನು ಆಳಿದ ಒಂದು ಕಾಲದ ಡಾನ್. ಮುಂಬೈ ಸರಣಿ ಸ್ಪೋಟದ ರುವಾರಿ ದಾವೂದ್​ ಇಬ್ರಾಹಿಂನ ಒಂದು ಕಾಲದ ಬಂಟ. ಈತನ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ ಹತ್ತಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಈತ ಕರ್ನಾಟಕ ಪೊಲೀಸರಿಗೂ ಅಗತ್ಯವಿದ್ದಾನೆ. ಈತನನ್ನು ಇತ್ತೀಚೆಗೆ ವಿದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರ ಅಂಚೆ ಇಲಾಖೆಯು ಕುಖ್ಯಾತ ಭೂಗತ ಪಾತಕಿಗಳಾದ ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿಯ ಚಿತ್ರಗಳಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದೆ. ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜನೆಯಡಿ ಮುದ್ರಿಸಲಾಗಿದ್ದು, ಹಲವರು ಅಂಚೆ ಇಲಾಖೆ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಸ್ಟಾಂಪ್.

ಅಂಚೆ ಇಲಾಖೆ ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಉತ್ತರಪ್ರದೇಶದ ಕಾನ್ಪುರ ಅಂಚೆ ಇಲಾಖೆ ಹೀಗೆ ಭೂಗತ ಪಾತಕಿಗಳ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ಸಾಧಕರಿಗೆ ಅಗೌರವ ತೋರಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ಆದರೆ, ನಡೆದ ತಪ್ಪುಗಳ ಬಗ್ಗೆ ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ವರ್ಮಾ ಒಪ್ಪಿಕೊಂಡಿದ್ದು, ಅದು ಗುಮಾಸ್ತರ ಕಡೆಯಿಂದ ಆದ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ. “ಇದು ಹೇಗೆ ಸಂಭವಿಸಿತು ಮತ್ತು ಗುಮಾಸ್ತರಿಗೆ ಪಾತಕಿಗಳನ್ನು ಗುರುತಿಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

‘ಮೈ ಸ್ಟಾಂಪ್’ ಯೋಜನೆಯಡಿ ಆಸಕ್ತರು ನಿಗದಿತ ಶುಲ್ಕ ಪಾವತಿಸಿ ತಮ್ಮ ವ್ಯಕ್ತಿ ಚಿತ್ರವುಳ್ಳ ಅಂಚೆ ಚೀಟಿಯ ಹಾಳೆಗಳನ್ನು ಪಡೆಯಬಹುದು. ಈ ಸ್ಟಾಂಪ್‌ಗಳನ್ನು ಪತ್ರ, ಲಕೋಟೆ ಕಳುಹಿಸಲು ಬಳಸಬಹುದು. ಇದಕ್ಕಾಗಿ ಅರ್ಜಿದಾರರರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತು ಖಾತರಿಪಡಿಸುವ ದಾಖಲೆಯನ್ನು ಅಂಚೆ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *