SL Dharme Gowda Death – ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ
ಚಿಕ್ಕಮಗಳೂರಿನ ಕಡೂರು ತಾಲೂಕು ಗುಣಸಾಗರದ ಬಳಿ ರೈಲ್ವೆ ಹಳಿಯಲ್ಲಿ ಉಪಸಭಾಪತಿ ಧರ್ಮೇಗೌಡ ಅವರ ರುಂಡ ಮುಂಡ ಬೇರ್ಪಟ್ಟ ದೇಶಹ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ಚಿಕ್ಕಮಗಳೂರು(ಡಿ. 29): ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಅವರು ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ವಿಧಾನಪರಿಷತ್ನಲ್ಲಿ ನಡೆದ ಘಟನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಅವರು ಬರೆದಿಟ್ಟಿರುವ ಡೆತ್ನೋಟ್ನಿಂದ ತಿಳಿದುಬಂದಿದೆ. ನಿನ್ನೆ ತಡರಾತ್ರಿ ಕಡೂರು ತಾಲೂಕು ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿದೆ. ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಅವರನ್ನ ಅಗಲಿದ್ದಾರೆ. ಸಖರಾಯಪಟ್ಟಣದಿಂದ ಸಂಜೆ 6:30ಕ್ಕೆ ಖಾಸಗಿ ಡ್ರೈವರ್ ಜೊತೆ ಕಾರಿನಲ್ಲಿ ಹೊರಟ ಅವರು ಕಡೂರು ತಾಲೂಕು ಗುಣಸಾಗರ ಬಳಿ ಕಾರು ನಿಲ್ಲಿಸಿದ್ದಾರೆ. ತಮ್ಮಎಸ್ಕಾರ್ಟ್ ಸಿಬ್ಬಂದಿಯನ್ನ ಅಲ್ಲಿಯೇ ಬಿಟ್ಟು ಖಾಸಗಿ ಡ್ರೈವರ್ ಜೊತೆ ಅವರು ಹೊರಟಿದ್ದರು. ಒಬ್ಬ ವ್ಯಕ್ತಿಯ ಜೊತೆ ಸ್ವಲ್ಪ ಕೆಲಸ ಇದ್ದು ಹೋಗಿ ಬರುತ್ತೇನೆ ಎಂದು ಹೇಳಿ ಹೋದರೆನ್ನಲಾಗಿದೆ. ನಂತರ ಕಡೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಶತಾಬ್ದಿ ಎಕ್ಸ್ಪ್ರೆಸ್ ಬರುವ ಸಮಯ ವಿಚಾರಿಸಿದರೆನ್ನಲಾಗಿದೆ.
ಎಸ್.ಎಲ್. ಧರ್ಮೇಗೌಡ ಅವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಹಿನ್ನೆಲೆಯವರು. ಅವರ ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿತ್ತು. ಆರ್ಥಿಕವಾಗಿಯೂ ಅವರು ಒಳ್ಳೆಯ ಸ್ಥಿತಿಯಲ್ಲಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಮಟ್ಟದಿಂದ ವಿವಿಧ ಸ್ತರಗಳ ರಾಜಕೀಯದಲ್ಲಿ ಅನುಭವಿ ಎನಿಸಿದ್ದರು. ನಿನ್ನೆ ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಸಂತೋಷದಿಂದಲೇ ಅವರು ಪಾಲ್ಗೊಂಡರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ಧಾರೆ.
ಇತ್ತೀಚೆಗೆ ವಿಧಾನಪರಿಷತ್ನಲ್ಲಿ ನಡೆದ ಗಲಾಟೆ ಘಟನೆ ಧರ್ಮೇಗೌಡ ಅವರ ಮನಸಿಗೆ ಘಾಸಿ ತಂದಿತ್ತು. ಸಭಾಪತಿ ಪೀಠದ ಮೇಲೆ ಕುಳಿತಿದ್ದ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದು ಅವರಿಗೆ ಬಹಳ ನೋವು ತಂದಿತ್ತು. ಮಾಧ್ಯಮಗಳ ಮುಂದೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಹೋದರೂ ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು. ಡೆತ್ನೋಟ್ನಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ, ಘಟನೆಯಿಂದ ಬಹಳ ನೋವಾಗಿತ್ತು ಎಂದಿದ್ಧಾರೆ. ಡೆತ್ ನೋಟ್ನಲ್ಲಿ ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆ ಕೂಡ ಅವರು ಯಾಚಿಸಿದ್ಧಾರೆ.
ಧರ್ಮೇಗೌಡ ರಾಜಕೀಯ ಹಾದಿ:
ಬಿಳಕಲ್ ಹಳ್ಳಿ ಗ್ರಾಮಪಂಚಾಯತ್ ಸದಸ್ಯ.
ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷ
ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ.ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ.
ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷ
ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷ
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ.
ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ.
ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ.
ನ್ಯಾಫೆಡ್ ಸಂಸ್ಥೆ ನಿರ್ದೇಶಕ.
ಇಂಡಿಯನ್ ಪೋಟಾಸ್ ಲಿಮಿಟೆಡ್ ನಿರ್ದೇಶಕ.
ತಾಲೂಕು ಪಂಚಾಯತ್ ಸದಸ್ಯ
ಜಿಲ್ಲಾಪಂಚಾಯತ್ 2 ಬಾರಿ ಸದಸ್ಯ.
ಬೀರೂರು ವಿಧಾನಸಭಾ ಕ್ಷೇತ್ರದ ಸದಸ್ಯ
ಒಂದು ಬಾರಿ ವಿಧಾನಪರಿಷತ್ ಸದಸ್ಯ