Grama Panchayath Election Results: ಗೆಲುವು ತಮ್ಮದೇ ಎನ್ನುತ್ತಿರುವ ಬಿಜೆಪಿ, ಕಾಂಗ್ರೆಸ್; ಚುನಾವಣಾ ಆಯೋಗ ಬೇಸರ

ಪಕ್ಷರಹಿತವಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗಿದ್ದರೂ ವಿವಿಧ ರಾಜಕೀಯ ಪಕ್ಷಗಳು ಪರೋಕ್ಷವಾಗಿ ನಿರ್ದಿಷ್ಟ ಅಭ್ಯರ್ಥಿಗಳಿಗೆ ಬೆಂಬಲ ನೀಡಿವೆ. ಅದರಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿವೆ. ಕಾಂಗ್ರೆಸ್ ಅತಿ ಸಮೀಪದಲ್ಲೇ ಇದೆ.

ಬೆಂಗಳೂರು(ಡಿ. 31): ರಾಜ್ಯದ 5728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳ ಫಲಿತಾಂಶ ಬಹುತೇಕ ಹೊರಬಿದ್ದಿದೆ. ವಿವಿಧ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಲೆಕ್ಕ ಇಟ್ಟುಕೊಂಡಿವೆ. ಅದರಂತೆ ಬಿಜೆಪಿ ತನ್ನ ಬೆಂಬಲಿತರು 20,428 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ, ಕಾಂಗ್ರೆಸ್ ಬೆಂಬಲಿತರು 19,253 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 12,731 ಸ್ಥಾನಗಳಲ್ಲಿ ಜಯಿಸಿದ್ದಾರೆ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಇದರ ಮಧ್ಯೆ, ಪಕ್ಷರಹಿತವಾಗಿ ಚುನಾವಣೆ ನಡೆಸಿದ್ದ ಚುನಾವಣಾ ಆಯೋಗ ಬೇಸರಗೊಂಡಿದೆ. ಮಾನ್ಯ ಪಕ್ಷಗಳ ಚಿಹ್ನೆ ಅಡಿ ಸ್ಪರ್ಧಿಸಲು ಈ ಬಾರಿ ಅವಕಾಶ ಇರಲಿಲ್ಲ. ಆದರೆ ವಿವಿಧ ಪಕ್ಷಗಳು ನಿರ್ದಿಷ್ಟ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಇದು ಪಕ್ಷಸಹಿತ ಚುನಾವಣೆಯಂತೆ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ (ಸಿಇಸಿ) ಇರಿಸುಮುರುಸುಗೊಂಡಿದೆ.

ರಾಜ್ಯದಲ್ಲಿ 5,278 ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಸ್ಥಾನಗಳಿರುವುದು 91339. ವಿವಿಧೆಡೆ 8074 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಇನ್ನೂ ಕೆಲವೆಡೆ ಬೇರೆ ಬೇರೆ ಕಾರಣಗಳಿಗೆ ಜನರು ಮತದಾನ ಬಹಿಷ್ಕರಿಸಿದ್ದಾರೆ. ನಾಮಪತ್ರಗಳೇ ಸಲ್ಲಿಕೆಯಾಗದಂತೆ ನೋಡಿಕೊಂಡಿದ್ದಾರೆ. ಅಂತಿಮವಾಗಿ 82,616 ಗ್ರಾ.ಪಂ. ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆಯಾಯಿತು. ಬೀದರ್ ಹೊರತುಪಡಿಸಿ ಉಳಿದ ಕಡೆ ಮತಪತ್ರಗಳ ಮೂಲಕವೇ ಮತದಾನ ಪ್ರಕ್ರಿಯೆ ಮಾಡಲಾಯಿತು. ಹೀಗಾಗಿ, ಮತ ಎಣಿಕೆ ಕಾರ್ಯ ಬಹಳ ನಿಧಾನಗತಿಯಲ್ಲಿ ಸಾಗಿತು. ನಿನ್ನೆ ಬುಧವಾರ ತಡರಾತ್ರಿಯಾದರೂ ಸಂಪೂರ್ಣ ಫಲಿತಾಂಶ ಬಂದಿರಲಿಲ್ಲ.

ಪಕ್ಷವಾರು ಮಾಹಿತಿ (ವಿವಿಧ ರಾಜಕೀಯ ಪಕ್ಷಗಳು ಹೇಳಿಕೊಂಡ ಮಾಹಿತಿ ಪ್ರಕಾರ):

ಒಟ್ಟು ಗ್ರಾ.ಪಂ.: 5728
ಒಟ್ಟು ಸ್ಥಾನ: 91339
ಅವಿರೋಧ ಆಯ್ಕೆ: 8074ಚುನಾವಣೆ ನಡೆದದ್ದು: 82616
ಬಿಜೆಪಿ ಬೆಂಬಲಿತರು: 20428
ಕಾಂಗ್ರೆಸ್ ಬೆಂಬಲಿತರು: 19253
ಜೆಡಿಎಸ್ ಬೆಂಬಲಿತರು: 12731
ಇತರೆ: 8062

ಈ ಅಂಕಿ ಅಂಶ ನಿಜವೇ ಆಗಿದ್ದರೆ ಬಿಜೆಪಿಯದ್ದು ಐತಿಹಾಸಿಕ ಸಾಧನೆಯೇ ಆಗುತ್ತದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಜಯಭೇರಿ ಭಾರಿಸುವ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವತ್ತೂ ಮಿಂಚಿದ್ದಿಲ್ಲ. ಇಲ್ಲಿ ಅಗ್ರಜನ ಸ್ಥಾನ ಕಾಂಗ್ರೆಸ್​ನದ್ದೇ ಇರುತ್ತಿತ್ತು. ಈ ಬಾರಿ ಬಿಜೆಪಿ ಗ್ರಾಮೀಣ ಭಾಗದ ರಾಜಕಾರಣದಲ್ಲೂ ಬೇರುಬಿಟ್ಟಿರುವಂತೆ ತೋರುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಬೆಂಬಲಿತ ಅಭ್ಯರ್ಥಿಗಳೇ ಈ ಬಾರಿಯೂ ಹೆಚ್ಚು ಗೆದ್ದಿದ್ದಾರೆಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ, ಪಕ್ಷರಹಿತ ಇರುವುದರಿಂದ ಬಿಜೆಪಿ ಆಪರೇಷನ್ ಕಮಲ ನಡೆಸಿ ಸದಸ್ಯರನ್ನ ಖರೀದಿಸಿ ಪಂಚಾಯಿತಿ ಆಡಳಿತವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಕೆಲ ಕೈ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಹಲವು ಗಮನಾರ್ಹ ಸಂಗತಿಗಳು ಗಮನ ಸೆಳೆದವು. ಕೌಟುಂಬಿಕ ಕದನದಿಂದ ಹಿಡಿದು ವಿವಿಧ ವರ್ಗದ ಜನರ ಸೋಲು ಗೆಲುವು ನಡೆಯಿತು. ಬಲಾಢ್ಯರು ಮಣ್ಣು ಮುಕ್ಕಿದ್ದೂ ಆಯಿತು. ಕರ್ತವ್ಯನಿರತ ಚುನಾವಣಾ ಅಧಿಕಾರಿಯೊಬ್ಬರು ಮೃತಪಟ್ಟರು. ಫಲಿತಾಂಶ ಪ್ರಕಟಕ್ಕೆ ಮುನ್ನವೇ ಇಬ್ಬರು ಅಭ್ಯರ್ಥಿಗಳು ಸಾವನ್ನಪ್ಪಿದರು. ನಾಲ್ಕು ಕಡೆ ಮಂಗಳ ಮುಖಿಯರು ಗೆದ್ದರು. ದಿವ್ಯಾಂಗರೊಬ್ಬರು ಗೆಲುವಿನ ನಗೆ ಬೀರಿದರು. ಮಾಜಿ ಸಚಿವರರೊಬ್ಬರ ಕುಟುಂಬದವರೆಲ್ಲರೂ ಸೋಲಪ್ಪಿದ್ದು, ಕುಟುಂಬ ಸದಸ್ಯರ ಮಧ್ಯೆ ಸೆಣಸಾಟ, ತಾಯಿ ಸೋತಳೆಂದು ಮಗ ವಿಷ ಕುಡಿದದ್ದು ಇತ್ಯಾದಿ ಘಟನೆಗಳು, ಬೆಳವಣಿಗೆಗಳು ಆದವು. ಕೊಲೆ ಆರೋಪಿಯೊಬ್ಬ ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ್ದು, ಬರಿಗಾಲಿನಲ್ಲೇ ಏಕಾಂಗಿಯಾಗಿ ಹಣ ಖರ್ಚು ಮಾಡದೇ ಪ್ರಚಾರ ಮಾಡಿ ಗೆದ್ದದ್ದು, ತನ್ನ ಮತವೂ ಸಿಗದೇ ಒಬ್ಬ ಅಭ್ಯರ್ಥಿ ಶೂನ್ಯ ಸಂಪಾದನೆ ಮಾಡಿದ್ದು ಇತ್ಯಾದಿ ವಿಶೇಷತೆಗಳೂ ಗ್ರಾ.ಪಂ. ಚುನಾವಣೆಯಲ್ಲಿವೆ. ಹಾಗೆಯೇ, ಪ್ರಬಲ ರಾಜಕಾರಣಿಗಳ ಕುಟುಂಬ ಸದಸ್ಯರು, ಪಂಚಾಯಿತಿ ಅಧ್ಯಕ್ಷರು ಸೋಲುಂಡಿದ್ದಾರೆ. ಎಂಜಿನಿಯರ್, ಸ್ನಾತಕೋತ್ತರ ಪದವೀಧರರು ಹೀಗೆ ವಿದ್ಯಾವಂತರು ಚುನಾವಣೆಯಲ್ಲಿ ನಿಂತು ಗೆದ್ದಿದ್ದಾರೆ.

ಕೇವಲ ಒಂದು ಮತ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು ಹಲವರಿದ್ದಾರೆ. ಸಮ ಮತ ಗಳಿಸಿ ಲಾಟರಿ ಮೂಲಕ ಗೆದ್ದವರೂ ಹಲವರುಂಟು. ಹಲವರಿಗೆ ಅಂಚೆ ಮತಗಳು ವಿಜಯಮಾಲೆ ತಂದಿತ್ತಿವೆ.

ಇವತ್ತು ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಆದರೆ, ಪಕ್ಷಾವಾರು ಲೆಕ್ಕಾಚಾರದಲ್ಲಿ ಗೊಂದಲಗಳು ಮುಗಿಯುವ ಲಕ್ಷ ಇಲ್ಲ. ಗ್ರಾ.ಪಂ. ಆಡಳಿತ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳು ಸದಸ್ಯರೊಂದಿಗೆ ಹಗ್ಗ ಜಗ್ಗಾಟ ಜೋರಾಗಿ ನಡೆಸುವ ಸಾಧ್ಯತೆ ಇದೆ. ಇದರಲ್ಲಿ ಕುದುರೆ ವ್ಯಾಪಾರವಾಗಿ ಹಣದ ಹೊಳೆ ಹರಿದರೂ ಅಚ್ಚರಿ ಇಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *