ರಾಜೀನಾಮೆ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ..!
ನಾನು ಮತ್ತು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು. ಇಬ್ಬರು ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು. ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕು ಎಂದು ಆಸೆ ಸರ್ ಎಂದು ಅವರಿಗೆ ಹೇಳಿದ್ದೆ.
ಚಿಕ್ಕಮಗಳೂರು(ಜ.02): 10 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣ(ಕೆಫೆ ಕಾಫಿ ಡೇ ಮಾಲೀಕ) ಮಾತ್ರ ಧೈರ್ಯವಾಗಿ ರಾಜೀನಾಮೆ ಕೊಡಿ, ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ನಿರ್ಧಾರ ಮಾಡಿದ್ದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಅಣ್ಣಾಮಲೈ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕೆಫೆ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದೇ ವೇಳೆ, ಮಾತನಾಡಿದ ಅವರು, ನಾನು ಮತ್ತು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು. ಇಬ್ಬರು ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು. ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕು ಎಂದು ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರನ್ನ ನೆನಪಿಸಿಕೊಂಡರು.
ಯಾವ ದಿನದಂದು ಪೇಪರ್ ಟೈಪ್ ಮಾಡಬೇಕು ಎಂದು ನಾವಿಬ್ಬರು ನಿರ್ಧಾರ ಮಾಡಿದ್ದೆವು ಎಂದರು. ರಾಜೀನಾಮೆ ಕೊಟ್ಟ ಬಳಿಕ ಬಾಂಬೆಯಿಂದ ಫೋನ್ ಮಾಡಿದ್ದರು. ಬಹಳ ಕಷ್ಟದ ಕೆಲಸ ಯಾರೂ ಮಾಡಲ್ಲ. ಜನ ನಿಮಗೆ ಮೂರ್ಖ ಎನ್ನಬಹುದು, ಫೂಲ್ ಎನ್ನಬಹುದು. ಆದರೆ, ನನಗೆ ನಿಮ್ಮ ಉದ್ದೇಶ ಏನೆಂದು ಗೊತ್ತು ಎಂದಿದ್ದರು ಎಂದು ಅವರನ್ನು ಸ್ಮರಿಸಿದರು.
ನಾನು ಏನು ಮಾಡಿದರೂ ಅವರು ಮೇಲಿಂದ ನೋಡುತ್ತಿದ್ದಾರೆ. ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.
ಅಣ್ಣಾಮಲೈ ಕಂಡೊಡನೆ ಸೆಲ್ಫಿಗೆ ಮುಗಿಬಿದ್ದ ಪೊಲೀಸರು :
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಇಳಿದರೂ ಇಲಾಖಾ ಸಿಬ್ಬಂದಿಗಳಿಗೆ ಅಣ್ಣಾಮಲೈ ಮೇಲಿನ ಕ್ರೇಜ್-ಗೌರವ ಒಂದಿಷ್ಟು ಕಡಿಮೆಯಾಗಿಲ್ಲ. ಅವರನ್ನ ಕಂಡ ಕೂಡಲೇ ಇಲಾಖೆ ಸಿಬ್ಬಂದಿಗಳೇ ವಿಥ್ ಯೂನಿಫಾರಂ ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದಾರೆ.ನಿವೃತ್ತ ಐಪಿಎಸ್ ಅಣ್ಣಾಮಲೈ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆಯವರ ಪುತ್ಥಳಿ ನಿರ್ಮಾಣಕ್ಕೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿಗೆ ಆಗಮಿಸಿದ್ದರು. ಈ ವೇಳೆ, ಅವರು ಕಾರಿನಿಂದ ಇಳಿಯುತ್ತಿದ್ದಂತೆ ಅವರನ್ನ ಕಂಡ ಸ್ಥಳೀಯರು, ಯುವಕ-ಯುವತಿಯರು ಹಾಗೂ ಪೊಲೀಸರು ಕೂಡ ಕೈಯಲ್ಲಿ ಮೊಬೈಲ್ ಹಿಡಿದು ಸೆಲ್ಫಿಗಾಗಿ ಮುಗಿಬಿದ್ದರು.
ಎಲ್ಲರಿಗೂ ಸೆಲ್ಫಿಗೆ ಫೋಸ್ ನೀಡುವಷ್ಟರಲ್ಲಿ ಅಣ್ಣಾಮಲೈ ಸುಸ್ತಾಗಿದ್ದರು. ಕಾರಿನಿಂದ ಇಳಿದು ವೇದಿಕೆ ಹತ್ತುವವರೆಗೂ ದಶದಿಕ್ಕುಗಳಲ್ಲೂ ಇದ್ದವರು ಕೈಯಲ್ಲಿದ್ದ ಮೊಬೈಲ್ನಲ್ಲಿ ಸೆಲ್ಫಿ ಆನ್ ಮಾಡಿಕೊಂಡು ಸರ್… ಒಂದ್ ಫೋಟೋ ಪ್ಲೀಸ್… ಸರ್… ಪ್ಲೀಸ್ ಒಂದು ಸೆಲ್ಫಿ ಎಂದು ಸೆಲ್ಫಿ ಮೂಲಕವೇ ವೇದಿಕೆ ಹತ್ತಿಸಿದರು. ಅವರು ವೇದಿಕೆ ಹತ್ತಿದರೂ ಮೊಬೈಲ್ ಹಿಡಿದು ಸ್ಟೇಜ್ ಮುಂಭಾಗ ಕಾದವರ ಸಂಖ್ಯೆಯೂ ದೊಡ್ಡದಿತ್ತು.
ಅಣ್ಣಾಮಲೈ ಪೊಲೀಸ್ ಇಲಾಖೆಯಲ್ಲೂ ಇದ್ದಾಗಲೂ ಜನ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದರು. ಈಗ ಐಪಿಎಸ್ಗೆ ರಾಜೀನಾಮೆ ನೀಡಿ ಫುಲ್ ಟೈಂ ರಾಜಕಾರಣಿಯಾದರೂ ಈಗಲೂ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಕೆಲವರಿಗೆ ಅಣ್ಣಾಮಲೈ ಜೊತೆ ಸೆಲ್ಫಿ ತೆಗೆದುಕೊಳ್ಳುವ ಆಸೆ ಇದ್ದರೂ ಅವರ ಸುತ್ತಲೂ ಜೇನಿನಂತೆ ಸುತ್ತುವರಿದಿದ್ದ ಜನರನ್ನ ಕಂಡೇ ಸುಮ್ಮನಾದರು.