ಜಿಎಸ್ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣ ತೆರಿಗೆ ಸಂಗ್ರಹ
ಜಿಎಸ್ ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020ರ ಡಿಸೆಂಬರ್ ತಿಂಗಳ ಆದಾಯ ಕಳೆದ ವರ್ಷದ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ ಎಂದೂ ಹೇಳಲಾಗಿದೆ.
ನವದೆಹಲಿ; ಡಿಸೆಂಬರ್ನಲ್ಲಿ 1.15 ಲಕ್ಷ ಕೋಟಿ ದಾಖಲೆ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದೆ. 2020 ಡಿಸೆಂಬರ್ನಲ್ಲಿ ಜಿಎಸ್ಟಿ ಒಟ್ಟು ಆದಾಯ 1,15,174 ಕೋಟಿ ಸಂಗ್ರಹವಾಗಿದೆ. ಮತ್ತು 2017 ಜುಲೈ 1ರಿಂದ ಜಿಎಸ್ಟಿ ಜಾರಿಗೆ ಬಂದ ಬಳಿಕ ಸಂಗ್ರಹವಾಗಿರುವ ಅತ್ಯಧಿಕ ಮೊತ್ತ ಇದಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
“ಇದು ಕಳೆದ 21 ತಿಂಗಳುಗಳಿಂದ ಮಾಸಿಕ ಆದಾಯದಲ್ಲಿ ಅತ್ಯಧಿಕ ಸಂಗ್ರಹವಾಗಿದೆ. ಇದು ಕೋವಿಡ್ ಸಾಂಕ್ರಾಮಿಕದ ನಂತರ ಆರ್ಥಿಕತೆ ತ್ವರಿತವಾಗಿ ಚೇತರಿಕೆ ಕಾಣುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. 2020 ರ ನವೆಂಬರ್ ತಿಂಗಳಿನಿಂದ ಡಿಸೆಂಬರ್ 31 ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 87 ಲಕ್ಷ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರಲ್ಲಿ ಸಿಜಿಎಸ್ ಟಿ 21,365 ಕೋಟಿ, ಎಸ್ ಜಿಎಸ್ ಟಿ 27,804 ಕೋಟಿ, ಐಜಿಎಸ್ ಟಿ 57,426 ಕೋಟಿ (ಸರಕು ಗಳ ಆಮದಿಗೆ 27,050 ಕೋಟಿ ರೂ.ಗಳನ್ನು ಸೇರಿ) ಮತ್ತು ಸೆಸ್ 8,579 ಕೋಟಿ (ಸರಕುಗಳ ಆಮದಿನ ಮೇಲೆ 971 ಕೋಟಿ ರೂ.) ಸೇರಿದೆ.ಈ ಮೂಲಕ ದೇಶದಲ್ಲೇ ಡಿಸೆಂಬರ್ ನಲ್ಲಿ ಹೆಚ್ಚು ಮೊತ್ತದ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆಯ ಹೇಳಿದೆ.
ಈ ಕುರಿತಂತೆ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಸರಕಾರವು ರೂ.23,276 ಕೋಟಿಯನ್ನು ಸಿಜಿಎಸ್ ಟಿಗೆ ಮತ್ತು ಐಜಿಎಸ್ಟಿಯಿಂದ ರೂ.17,681 ಕೋಟಿಗಳನ್ನು ನಿಯಮಿತ ಒಪ್ಪಂದದಂತೆ ಇತ್ಯರ್ಥಪಡಿಸಿದೆ. ಜಿಎಸ್ ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020ರ ಡಿಸೆಂಬರ್ ತಿಂಗಳ ಆದಾಯ ಕಳೆದ ವರ್ಷದ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ ಎಂದೂ ಹೇಳಲಾಗಿದೆ.