ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್
ಮಾಜಿ ಸಚಿವ ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಮುರುಗೇಶ್ ನಿರಾಣಿ ವಿರುದ್ಧ ಹಿಂದೂ ದೇವತೆಗಳನ್ನು ಅವಮಾನಿಸಿದ ಆರೋಪದ ಮೇಲೆ ಸಿಸಿಎಚ್ 82 ನ್ಯಾಯಾಲಯದ ಆದೇಶದಂತೆ ಕೊಡಿಗೆಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 294A,295ರಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಜನವರಿ 03); ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರಣಕ್ಕೆ ಬಿಜೆಪಿ ಶಾಸಕ ಮಾಜಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮುರುಗೇಶ್ ನಿರಾಣಿ ಹಿಮದೂ ದೇವತೆಗಳನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದರು. ತಮ್ಮ ಹೇಳಿಕೆಯಲ್ಲಿ, “ಮಗಳನ್ನೇ ಮದುವೆಯಾದ ಬ್ರಹ್ಮ ನಮಗೆ ದೇವರು. 16 ಸಾವಿರ ಹೆಂಡಂದಿರನ್ನು ಮದುವೆಯಾದ ದನಾ ಕಾಯುವ ಕೃಷ್ಣ ನಮ್ಮ ದೇವರು. ಮುಗ್ಧ ಬಾಲಕಿಯರು ಸರೋವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದ ತುಡುಗ ನಮ್ಮ ದೇವರು. ತಲೆ ಮೇಲೆ ಒಬ್ಬಳು ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡಾತ ನಮಗೆ ದೇವರು” ಎಂದಿದ್ದರು.

ಹಿಂದೂ ದೇವತೆಗಳ ವಿರುದ್ಧ ಮುರುಗೇಶ್ ನಿರಾಣಿ ಹೇಳಿಕೆ.
ಇನ್ನೂ ಮುಂದುವರೆದು ರಾಮನನ್ನೂ ಅವಮಾನಿಸಿದ್ದ ಮುರುಗೇಶ್ ನಿರಾಣಿ, “ತುಂಬು ಗರ್ಭಿಣಿ ಯನ್ನು ಕಾಡಿಗಟ್ಟಿದ ರಾಮ ನಮ್ಮ ದೇವರು. ಹಾವು, ಹಂದಿ, ಕುದುರೆ, ಕತ್ತೆ, ನಾಯಿ, ಆಕಳು, ರತ್ನಪಕ್ಷಿ ಇನ್ನೂ ಹಲವು ದೇವರಾದರೆ ಕಾಗೆ, ಗೂಬೆ, ಬೆಕ್ಕು ಅಪಶಕುನ. ದೇವರಿಗೆ ದೇವರೆನಿಸಿಕೊಂಡಾತ ಇಂದ್ರನು ಮಾಡಲಾರದ ಅನಾಚಾರಗಳು ಎಷ್ಟು? ಆದರೂ ಆತ ನಮ್ಮ ದೇವರು. ಗಂಡನ ಸಂಪರ್ಕ ಪಡೆಯದೇ ಸೂರ್ಯನಿಂದ, ಯಮನಿಂದ, ಇಂದ್ರನಿಂದ, ವಾಯುವಿನಿಂದ ಪುತ್ರರನ್ನು ಪಡೆದ ಕುಂತಿ ದೇವತೆ” ಎಂದು ಛೇಡಿಸಿದ್ದರು.
ಅಲ್ಲದೆ, ಸನಾತನಿಗಳು ತಮ್ಮ ತೀಟೆಗೆ ನೂರೆಂಟು ಕಥೆಗಳನ್ನು ಕಟ್ಟಿ ಸ್ತ್ರೀಯರನ್ನು ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾಡಿದ್ದರು. ಮುರುಗೇಶ್ ನಿರಾಣಿ ಅವರು ಈ ಹೇಳಿಕೆ ನಂತರ ವಾಟ್ಸಾಪ್ಗಳಲ್ಲೂ ಹರಿದಾಡಲು ಆರಂಭಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೀಗಾಗಿ ಮುರುಗೇಶ್ ನಿರಾಣಿ ವಿರುದ್ಧ ರಾಜ್ಕುಮಾರ್ ಕಟುವ ಎಂಬವರು ಕಳೆದ ಜುಲೈನಲ್ಲೇ ನ್ಯಾಯಾಲಯದ ಮೊರೆ ಹೋಗಿದ್ದರು.
ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯ ಮಾಜಿ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಡಿ.26 ರಂದೇ ಕೊಡಿಗೇಹಳ್ಳಿ ಪೊಲೀಸರಿಗೆ ಸೂಚನೆ ನೀಡಿತ್ತು.
ಹೀಗಾಗಿ ಸಿಸಿಎಚ್ 82 ನ್ಯಾಯಾಲಯದ ಆದೇಶದಂತೆ ಕೊಡಿಗೆಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 294A,295ರಡಿ ಪ್ರಕರಣ ದಾಖಲಾಗಿದೆ.