Sourav Ganguly: ಸೌರವ್ ಗಂಗೂಲಿ ಆರೋಗ್ಯ ಸ್ಥಿತಿ ಈಗ ಹೇಗಿದೆ?: ಇಲ್ಲಿದೆ ಅಪ್ಡೇಟ್ಸ್
ಶನಿವಾರ ಮುಂಜಾನೆ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಸೌರವ್ ಗಂಗೂಲಿಗೆ ಹೃದಯಬೇನೆ ಕಾಣಿಸಿಕೊಂಡು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನ ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಗಂಗೂಲಿ ಅವರ ಆರೋಗ್ಯದ ಕುರಿತು 24 ಗಂಟೆಗಳ ಕಾಲ ನಿಗಾವಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಆಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಬಳಿಕ ಗಂಗೂಲಿ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದಾರೆ ಎಂದು ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್ ಖಾನ್ ಹೇಳಿದ್ದಾರೆ. ಶನಿವಾರ ಮುಂಜಾನೆ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಂಗೂಲಿಗೆ ಹೃದಯಬೇನೆ ಕಾಣಿಸಿಕೊಂಡು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ಸೌರವ್ ಗಂಗೂಲಿ ಅವರು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಪ್ರಸ್ತುತ ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದಾರೆ. ಅವರ ಹೃದಯದಲ್ಲಿ ಎರಡು ಅಡೆತಡೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಖಾನ್ ಹೇಳಿದ್ದಾರೆ.
ಅಲ್ಲದೇ 48 ವರ್ಷದ ಗಂಗೂಲಿ ಅವರ ಕೊರೋನಾ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಗಂಗೂಲಿ ಅವರು ಹೃದಯ ವಂಶಾವಳಿಯಿಂದ ವರ್ಗಾವಣೆಯಾಗಿರುವ ಹೃದಯ ಸಮಸ್ಯೆ ಹೊಂದಿದ್ದಾರೆ, ಅವರು ಶನಿವಾರ ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದಾಗ ಅವರ ನಾಡಿಮಿಡಿತ ನಿಮಿಷಕ್ಕೆ 70 ಬಾರಿ ಬಡಿಯುತ್ತಿತ್ತು. ಬಿಪಿ 130/80 ಎಂಎಂ ಹೆಚ್ಡಿ ಇತ್ತು. ಇಸಿಜಿ ಪರೀಕ್ಷೆಯಲ್ಲಿ ಹೈಪರ್ ಅಕ್ಯೂಟ್ ಎಸ್ಟಿ ವಿಭಾಗದಲ್ಲಿ ಏರುಪೇರಿರುವುದು ಪತ್ತೆಯಾಗಿದೆ.
ಅವರ ದೇಹದಲ್ಲಿ ರಕ್ತ ಸಂಚಾರ ಸಾಧಾರಣವಾಗಿದೆ. ಅವರಿಗೆ ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಲಸಿಕೆ ಹಾಗೂ ಎರಡು ಬಾರಿ ಆ್ಯಂಟಿ ಪ್ಲೇಟ್ಲೇಟ್ಸ್ ಡೋಸ್ಗಳನ್ನು ನೀಡಲಾಗಿದೆ. ಅವರಿಗೆ ಪ್ರಾಥಮಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಾಗ್ತಿದೆ ಎಂದು ವುಡ್ಲ್ಯಾಂಡ್ಸ್ ಆಸ್ಪತ್ರೆಯ ಸಿಇಓ ಡಾ. ರೂಪಾಲಿ ಬಸು ಅವರು ಹೇಳಿಕೆ ನೀಡಿದ್ದಾರೆ.
ಇನ್ನೂ ದಾದಾ ಅನಾರೋಗ್ಯದ ವಿಷಯ ಕೇಳಿ ಆತಂಕಕ್ಕೊಳಗಾಗಿರುವ ಭಾರತದ ಮಾಜಿ ಮತ್ತು ಹಾಲಿ ಆಟಗಾರರು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಗಂಗೂಲಿಯೊಂದಿಗೆ ಅನೇಕ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್, ಪ್ರತಿದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚೆಚ್ಚು ಸುಧಾರಣೆ ಕಂಡುಬರಲಿ ಎಂದು ಹಾರೈಸುವೆ, ಗೆಟ್ ವೆಲ್ ಸೂನ್,’ ಎಂದು ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ‘ನೀವು ಆದಷ್ಟು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಗೆಟ್ ವೆಲ್ ಸೂನ್,’ ಅಂತ ಟ್ವೀಟ್ ಮಾಡಿದ್ದಾರೆ.
ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಶ್ರೇಷ್ಠ ಕ್ಯಾಪ್ಟನ್ಗಳಲ್ಲಿ ಒಬ್ಬರೆನಿಸಿದ್ದಾರೆ. ಟೀಂ ಇಂಡಿಯಾ ವಿಶ್ವದ ಬಲಾಢ್ಯ ಕ್ರಿಕೆಟ್ ತಂಡವಾಗಿ ಪುನಶ್ಚೇತನಗೊಳ್ಳಲು ಅವರ ನಾಯಕತ್ವ ಮುನ್ನುಡಿ ಬರೆದಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಮತ. ಬಿಸಿಸಿಐನ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದು, ಮಂಡಳಿ ಆಡಳಿತದಲ್ಲಿ ಸಕಾತ್ಮಕ ಪ್ರಭಾವ ಬೀರುವ ನಿರೀಕ್ಷೆಗಳಿವೆ. ಈ ಮಧ್ಯೆ, ಅವರು ಬಿಜೆಪಿಗೆ ಸೇರ್ಪಡೆಗೊಂಡು ರಾಜಕಾರಣಕ್ಕೆ ಬರುವ ಬಗ್ಗೆಯೂ ಸುದ್ದಿಗಳಿವೆ.