ತೆರೆದ ಶಾಲೆ ಬಾಗಿಲು; 2ನೇ ದಿನ ಏರಿದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ
ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ 7 ತಿಂಗಳುಗಳಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳು ಜನವರಿ1ರಿಂದ ಆರಂಭವಾಗಿದ್ದು, 2ನೇ ದಿನವಾಗ ಶನಿವಾರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಬೆಂಗಳೂರು: ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ 7 ತಿಂಗಳುಗಳಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳು ಜನವರಿ1ರಿಂದ ಆರಂಭವಾಗಿದ್ದು, 2ನೇ ದಿನವಾದ ಶನಿವಾರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹೌದು.. ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಪುನಾರಂಭವಾಗಿದ್ದು, ನಿಧಾನವಾಗ ವಿದ್ಯಾರ್ಥಿಗಳು ಶಾಲೆಗಳ ಮುಖ ಮಾಡುತ್ತಿದ್ದಾರೆ. ಶಾಲೆ ತೆರೆದ 2ನೇ ದಿನ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆ ಕಂಡುಬಂದಿದೆ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದು, ‘ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಶೇ 45.84 ಮತ್ತು ದ್ವಿತೀಯ ಪಿಯುಸಿ ಗೆ ಶೇ 33.04 ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಯ ಹಲವು ಶಾಲೆಗಳಿಗೆ ಸಚಿವರು ಶನಿವಾರ ಭೇಟಿ ನೀಡಿ, ಪೋಷಕರು ಮತ್ತು ಮಕ್ಕಳ ಜೊತೆ ಶಾಲಾರಂಭದ ಕುರಿತು ಸಂವಾದ ನಡೆಸಿದರು. ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿರುವ 16,850 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,25,896 ವಿದ್ಯಾರ್ಥಿಗಳು (ಶೇ 45.84), 5,492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖ ಲಾಗಿರುವ 3,30,877 ವಿದ್ಯಾರ್ಥಿಗಳ ಪೈಕಿ 1,09,319 ವಿದ್ಯಾರ್ಥಿಗಳು (ಶೇ 33.04) ಶನಿವಾರ ತರಗತಿಗಳಿಗೆ ಹಾಜರಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ರಂಭದ ಎರಡನೇ ದಿನವಾದ ಶನಿ ವಾರ ರಾಜ್ಯದೆಲ್ಲೆಡೆ ಶುಕ್ರವಾರಕ್ಕಿಂತ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ. ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿದೆ ಎಂದು ಹೇಳಿದರು.
‘ಕೆಲವು ಪೋಷಕರು ಮುಂದಿನ ವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸಿರುವುದರಿಂದ ಸೋಮವಾರದಿಂದ ಶಾಲೆಗಳಲ್ಲಿನ ಹಾಜರಾತಿ ಹೆಚ್ಚಾಗುವ ನಿರೀಕ್ಷೆಯಿದೆ. ಉಳಿದ ತರಗತಿಗಳನ್ನೂ ಆರಂಭಿಸಲು ಪೋಷಕರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಠ್ಯಗಳನ್ನು ಲಭ್ಯವಾಗಬಹುದಾದ ಶಾಲಾ ಅವಧಿ ಮತ್ತು ಪರೀಕ್ಷೆಗೆ ಅಗತ್ಯವಿರುವಷ್ಟು ನಿಗದಿಪಡಿಸಲಾಗುವುದು. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹೊರೆಯಾಗದಂತೆ ಪಠ್ಯಕ್ರಮ ಇರಲಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟಿಸಲಾಗುವುದು’ ಎಂದು ಅವರು ಹೇಳಿದ್ದಾರೆ.