Darshan: ಡಿ ಬಾಸ್, ಡೆಡ್ಲಿ ಸೋಮ ಇಬ್ಬರಿಗೂ ʻಡಿʼ ಲಕ್; ಡಿ ಅಕ್ಷರದ ಗುಟ್ಟು ಬಿಚ್ಚಿಟ್ಟ ನಟ ಆದಿತ್ಯ
ಕಲಾಸಾಮ್ರಾಟ್ ಎಸ್ ನಾರಾಯಣ ಚೊಚ್ಚಲ ಬಾರಿಗೆ ನಟ ಆದಿತ್ಯಗೆ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾಗೆ ʻ5 ಡಿʼ ಎಂದು ನಾಮಕರಣ ಮಾಡಲಾಗಿದೆ. ವಿಶೇಷ ಅಂದರೆ ಎಸ್ ನಾರಾಯಣ್ ಅವರ ಚಂದ್ರ ಚಕೋರಿ ಚಿತ್ರದಲ್ಲೇ ಆದಿತ್ಯ ನಾಯಕನಾಗಬೇಕಿತ್ತಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಈ ಕಾಂಬಿನೇಷನ್ ಒಂದಾಗಿದೆ.
ಬೆಂಗಳೂರು(ಜ.03): ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಹಾಗೂ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ, ಇಬ್ಬರಿಗೂ ಡಿ ಅಕ್ಷರದ ಲಿಂಕ್ ಇದೆ. ಈ ಕುರಿತು ಇತ್ತೀಚೆಗಷ್ಟೇ ಖುದ್ದು ಆದಿತ್ಯ ಅವರೇ ಹೇಳಿಕೊಂಡಿದ್ದಾರೆ. ಹೌದು, ಡಿಬಾಸ್ನಲ್ಲಿ ಡಿ ಇದೆ, ದರ್ಶನ್ ಹೆಸರು ಪ್ರಾರಂಭ ಆಗುವುದೇ ಡಿಯಿಂದ. ಹಾಗೇ ನನ್ನನ್ನೂ ಡೆಡ್ಲಿ ಆದಿತ್ಯ ಅಂತ ಕರೆಯುತ್ತಾರೆ, ಅದೂ ಪ್ರಾರಂಭ ಆಗುವುದು ಡಿ ಅಕ್ಷರದಿಂದ. ಇನ್ನು ನನ್ನ ಹುಟ್ಟು ಹೆಸರು ಕೂಡ ದುಶ್ಯಂತ್ ಅಂತ, ಪ್ರಾರಂಭವಾಗುವುದು ಡಿ ಅಕ್ಷರದಿಂದಲೇ ಎಂದು ಡಿ ಲಿಂಕ್ ಅನ್ನು ಬಿಚ್ಚಿಟ್ಟರು ಆದಿತ್ಯ.
ಅಂದಹಾಗೆ ಇದಕ್ಕೆ ವೇದಿಕೆಯಾಗಲು ಕಾರಣ ಕೂಡ ಡಿ ಅಕ್ಷರವೇ. ಹೌದು, ಕಲಾಸಾಮ್ರಾಟ್ ಎಸ್ ನಾರಾಯಣ ಚೊಚ್ಚಲ ಬಾರಿಗೆ ನಟ ಆದಿತ್ಯಗೆ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾಗೆ ʻ5 ಡಿʼ ಎಂದು ನಾಮಕರಣ ಮಾಡಲಾಗಿದೆ. ವಿಶೇಷ ಅಂದರೆ ಎಸ್ ನಾರಾಯಣ್ ಅವರ ಚಂದ್ರ ಚಕೋರಿ ಚಿತ್ರದಲ್ಲೇ ಆದಿತ್ಯ ನಾಯಕನಾಗಬೇಕಿತ್ತಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಈ ಕಾಂಬಿನೇಷನ್ ಒಂದಾಗಿದೆ. ಇತ್ತೀಚೆಗಷ್ಟೇ ಈ ಹೊಸ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಯಿತು. ವಿಶೇಷ ಅಂದರೆ ಅದನ್ನು ಲಾಂಚ್ ಮಾಡಿದ್ದೂ ಕೂಡ ಡಿಬಾಸ್ ದರ್ಶನ್.
ವರ್ಷದ ಮೊದಲ ದಿನವೇ ಸಿನಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಟ ದರ್ಶನ್ ಫುಲ್ ಖುಷಿಯಾಗಿದ್ದರು. ಈ ವರ್ಷವಾದರೂ ಚಿತ್ರರಂಗ ಕೊರೊನಾ ಕಂಟಕದಿಂದ ಪಾರಾಗಿ ಮತ್ತೆ ಮೊದಲಿನಂತೆ ಸಿನಿಮಾಗಳು ರಿಲೀಸ್ ಆಗಲಿ, ಬಣ್ಣದ ಲೋಕ ವಿಜೃಂಭಿಸಲಿ ಎಂದು ಹಾರೈಸಿದರು. 1 ಟು 100 ಡ್ರೀಮ್ ಮೂವೀಸ್ ಬ್ಯಾನರ್ನ ಅಡಿಯಲ್ಲಿ ಸ್ವಾತಿ ಕುಮಾರ್ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಚೊಚ್ಚಲ ಸಿನಿಮಾದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಡೆಡ್ಲಿ ಆದಿತ್ಯ ಸಿಂಗ್ಗೆ ಶ್ಯಾನೆ ಟಾಪಾಗವ್ಳೆ ಖ್ಯಾತಿಯ ಸುಂದರಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಸಿನಿಮಾ ಒಂದರಲ್ಲಿ ಎಸ್. ನಾರಾಯಣ್ ಅವರ ಮಗಳ ಪಾತ್ರದಲ್ಲಿ ನಟಿಸಿರುವ ಅದಿತಿ ಅವರ ನಟನೆ ಕಂಡು, ನಾರಾಯಣ್ ಅವರೇ ೫ಡಿ ಚಿತ್ರಕ್ಕೆ ಅದಿತಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ಸದ್ಯ ಕನ್ನಡದ ಹುಡುಗಿ ಅದಿತಿ ಪ್ರಭುದೇವ ಅವರಂತೂ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲೀಗ ಬರೋಬ್ಬರಿ ಅರ್ಧ ಡಜನ್ಗೂ ಹೆಚ್ಚು ಸಿನಿಮಾಗಳಿವೆ. ತೋತಾಪುರಿ 1, ತೋತಾಪುರಿ 2, ಓಲ್ಡ್ ಮಾಂಕ್, ದಿಲ್ಮಾರ್, ಒಂಭತ್ತನೇ ದಿಕ್ಕು, ಗಜಾನನ ಮತ್ತು ಗ್ಯಾಂಗ್, ತ್ರಿಬ್ಬಲ್ ರೈಡಿಂಗ್ ಸೇರಿದಂತೆ ಈಗ 5ಡಿ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಅವುಗಳಲ್ಲಿ ಬಹುತೇಕ ಚಿತ್ರಗಳು ಇದೇ ವರ್ಷ ತೆರೆಗೆ ಅಪ್ಪಳಿಸಲಿವೆ. ಉಳಿದಂತೆ ಇನ್ನೂ ಕೆಲವೂ ಸದ್ಯ ಮಾತುಕತೆಯ ಹಂತದಲ್ಲಿವೆ. ಇನ್ನು ನಟ ಆದಿತ್ಯ ನಟಿಸಿರುವ ಮುಂದುವರೆದ ಅಧ್ಯಾಯ ಇನ್ನು ಕೆಲ ದಿನಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.