ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಭಾರತ..! ಬಹುಪರಾಕ್ ಎಂದ ಮೋದಿ..!
ಇಡೀ ಜಗತ್ತನ್ನೇ ಬುಡಮೇಲು ಮಾಡಿ ಅದೆಷ್ಟೋ ಜನರ ಜೀವವನ್ನು ಬಲಿಪಡೆದಿದ್ದು ಕೊರೋನಾ. ವಿಜ್ಞಾನಿಗಳು ಔಷಧಿಯ ಹುಡುಕಾಟಕ್ಕಾಗಿ ನಡೆಸಿದ ಪ್ರಯತ್ನವಂತೂ ನಮ್ಮ ಊಹೆಗೂ ಮೀರಿದ್ದು. ಹೀಗಿರುವಾಗ ಭಾರತೀಯರಿಗೆ ಒಂದು ಶುಭಸುದ್ದಿ ಬಂದಿದೆ. ಏನದು ಸುದ್ದಿ ಗೊತ್ತಾ..?
ಔಷಧಿಯ ಈ ಹುಡುಕಾಟದ ಫಲವಾಗಿ ಭಾರತದ ಎರಡು ಔಷಧಿಗಳು ಸಕ್ಸಸ್ ಕಂಡಿವೆ. ಭಾರತದ ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ತುರ್ತು ಬಳಕೆಗೆ ಅನುಮತಿಯನ್ನು ಪಡೆದಿವೆ. ಅಷ್ಟೇ ಅಲ್ಲದೇ ಭಾರತದ ಈ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ. ಕೋವಿಶೀಲ್ಡ್ ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಫಾರ್ಮಾ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಅಲ್ಲದೇ ಭಾರತದ ಸೀರಮ್ ಸಂಸ್ಥೆ ಅವರ ಉತ್ಪಾದನೆ ಮತ್ತು ಪ್ರಯೋಗ ಪಾಲುದಾರ.
ಕೋವ್ಯಾಕ್ಸಿನ್ ಕೋವಿಡ್ -19 ವಿರುದ್ಧ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ಭಾರತದ ಈ ಸಾಧನೆಗೆ ಪ್ರಧಾನಿ ಬಹುಪರಾಕ್ ಎಂದಿದ್ದಾರೆ. ಭಾರತದ ವೈದ್ಯರ, ವಿಜ್ಞಾನಿಗಳ ಮಹತ್ತರ ಸಾಧನೆಯನ್ನು ಶ್ಲಾಘಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಅಲ್ಲದೇ ಕೊರೋನಾ ವಾರಿಯರ್ಸ್ಗೂ ಅಭಿನಂದನೆ ಸಲ್ಲಿಸಿದ್ದಾರೆ. ಲಸಿಕೆ ಕಂಡುಹಿಡಿದ ವೈದ್ಯರು, ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.