ಭಾರತೀಯ ಕಂಪನಿ ತಯಾರಿಸಿದೆ ಎಂಬ ಕಾರಣಕ್ಕಾಗಿ ಕೋವ್ಯಾಕ್ಸಿನ್ ಗೆ ವಿರೋಧ: ಭಾರತ್ ಬಯೋಟೆಕ್ ಎಂಡಿ
ಭಾರತದಲ್ಲಿ ಅನುಮೋದನೆ ನೀಡಿರುವ ಇತರ ಲಸಿಕೆಗಳ ತಯಾರಕ ಸಂಸ್ಥೆಗಳು ಭಾರತದ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ್ನು ಕೇವಲ ಬಿಸಿ ನೀರಿಗೆ ಹೋಲಿಕೆ ಮಾಡಿದ್ದನ್ನು, ಭಾರತ್ ಬಯೋಟೆಕ್ ಸಂಸ್ಥೆ ತೀವ್ರವಾಗಿ ಖಂಡಿಸಿದೆ.
ಹೈದರಾಬಾದ್: ಭಾರತದಲ್ಲಿ ಅನುಮೋದನೆ ನೀಡಿರುವ ಇತರ ಲಸಿಕೆಗಳ ತಯಾರಕ ಸಂಸ್ಥೆಗಳು ಭಾರತದ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ್ನು ಕೇವಲ ಬಿಸಿ ನೀರಿಗೆ ಹೋಲಿಕೆ ಮಾಡಿದ್ದನ್ನು, ಭಾರತ್ ಬಯೋಟೆಕ್ ಸಂಸ್ಥೆ ತೀವ್ರವಾಗಿ ಖಂಡಿಸಿದೆ.
ಜ.04 ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಭಾರತ್ ಬಯೋಟೆಕ್ ನ ಎಂಡಿ ಡಾ.ಕೃಷ್ಣ ಯೆಲ್ಲಾ, ದೇಶ ತನ್ನದೇ ವಿಜ್ಞಾನಿಗಳ ಶ್ರಮದ ಬೆನ್ನಿಗೆ ನಿಲ್ಲುತ್ತಿಲ್ಲ, ಬ್ರಿಟನ್, ಅಮೆರಿಕಾದಲ್ಲಿ ತಯಾರಾಗದೇ ಭಾರತದಲ್ಲೇ ತಯಾರಾಗಿದೆ ಎಂಬ ಒಂದೇ ಕಾರಣಕ್ಕೆ ವಿಜ್ಞಾನಿಗಳ ಶ್ರಮವಕ್ಕೆ ಅಪಖ್ಯಾತಿ ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆತುರವಾಗಿ ಕೋವ್ಯಾಕ್ಸಿನ್ ಗೆ ಡಿಸಿಜಿಐ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಡಾ.ಯೆಲ್ಲಾ, ತುರ್ತು ಬಳಕೆಗೆ ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದು, ಕ್ಲಿನಿಕಲ್ ಟ್ರಯಲ್ ಗಳು ಹಾಗೂ ಎಫಿಕೆಸಿ ಅಧ್ಯಯನಗಳನ್ನು, ಪರಿಣಾಮಕಾರಿತ್ವ ಅಧ್ಯಯನಗಳನ್ನು ನಡೆಸದೇ ತುರ್ತು ಬಳಕೆಗೆ ಅನುಮತಿ ನೀಡಿರುವುದಕ್ಕೆ ತಮ್ಮ ಸಂಸ್ಥೆಯ ಲಸಿಕೆ ಹೊರತಾಗಿಲ್ಲ, ಬದಲಾಗಿ ಈ ಹಿಂದೆ ಹಂದಿ ಜ್ವರ ಸಾಂಕ್ರಾಮಿಕ ಎದುರಾಗಿದ್ದಾಗಲೂ ಈ ರೀತಿ ಅಧ್ಯಯನಗಳು ಪೂರ್ಣಗೊಳ್ಳುವ ಮುಂಚೆಯೇ ತುರ್ತು ಬಳಕೆಗೆ ಹಲವಾರು ಕಂಪನಿಗಳ ಲಸಿಕೆಗಳಿಗೆ ಅನುಮೋದನೆ ನೀಡಲಾಗಿತ್ತು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.
“ಹಂದಿ ಜ್ವರ ಕಾಣಿಸಿಕೊಂಡಾಗ 3 ನೇ ಹಂತದ ಟ್ರಯಲ್ ಗೂ ಮುನ್ನವೇ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು” ಎಂದು ಡಾ.ಕೃಷ್ಣ ಯೆಲ್ಲಾ ಮಾಹಿತಿ ನೀಡಿದ್ದಾರೆ.
ಎಬೋಲಾ ಲಸಿಕೆಗೂ 3 ನೇ ಹಂತದ ಟ್ರಯಲ್ ಗಳು ಮುಕ್ತಾಯಗೊಳ್ಳುವ ಮುನ್ನವೇ 2019 ರಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಭಾರತ್ ಬಯೋಟೆಕ್ ಸಂಸ್ಥೆ ಭಾರತೀಯ ಕಂಪನಿಯಾಗಿರುವುದರಿಂದ ಕೋವ್ಯಾಕ್ಸಿನ್ ನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೃಷ್ಣ ಯೆಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಮೂರನೇ ಹಂತದಲ್ಲಿ 26,000 ಸ್ವಯಂ ಸೇವಕರಿಗೆ ಮೊದಲ ಡೋಸ್ ಲಸಿಕೆ ನೀಡುವುದಕ್ಕೂ ಮುನ್ನವೇ ಡಿಸಿಜಿಐ ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ. ಈ ವಾರಾಂತ್ಯದ ವೇಳೆಗೆ ಅದು ಮುಕ್ತಾಯಗೊಳ್ಳಲಿದೆ.
ದೇಶೀಯವಾಗಿ ಈ ಪರಿಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಕ್ಲಿನಿಕಲ್ ಟ್ರಯಲ್ ಗಳು ನಡೆದಿದ್ದು, 25000 ಮಂದಿಯ ಸುರಕ್ಷತೆಯ ಬಗ್ಗೆ ಡಾಟಾ ಹೊಂದಿದ್ದು, ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಿರುವ ಬೇರೆ ಯಾವುದೇ ಭಾರತೀಯ ಕಂಪನಿಗಳ ಬಳಿ ಈ ರೀತಿಯ 1000 ಕ್ಕೂ ಹೆಚ್ಚಿನ ಮಂದಿಯ ಡಾಟಾ ಇಲ್ಲ ಎಂದು ಡಾ.ಕೃಷ್ಣ ಯೆಲ್ಲಾ ಹೇಳಿದ್ದಾರೆ.