ವಾಷಿಂಗ್ಟನ್ ಹಿಂಸಾಚಾರ: ಅಮೆರಿಕ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಾಣದ ರೀತಿಯ ಹಲ್ಲೆ- ಜೋ ಬೈಡನ್

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್‌ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್, ಇದು ಅಮೆರಿಕ ಇತಿಹಾಸದಲ್ಲೇ ‘ಅತ್ಯಂತ ಕರಾಳ ಕ್ಷಣ’ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಅಮೆರಿಕ ಕ್ಯಾಪಿಟಲ್‌ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಯಲ್ಲಿ ಭಾಗಿಯಾದರು. ಈ ಸುದ್ದಿ ಅಂತಾರಾಷ್ಚ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ಹಲ್ಲೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಈ ಕ್ಷಣ ನಮ್ಮ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿಯಾಗಿದೆ. ಅಮೆರಿಕ ಕ್ಯಾಪಿಟಲ್ (ಸಂಸತ್) ಕಟ್ಟಡದ ಮೇಲೆಯೇ ಹಲ್ಲೆ ನಡೆದಿದೆ. ಜನಪ್ರತಿನಿಧಿಗಳ ಮೇಲೆ ಹಲ್ಲೆಯಾಗಿದೆ. ಪೊಲೀಸರ ಮೇಲೆ ದಾಳಿ ನಡೆದಿದೆ. ರಿಪಬ್ಲಿಕ್ ಹೃದಯ ಭಾಗದಲ್ಲಿ ಕೆಲಸ ಮಾಡುತ್ತಿರುವ ಪಬ್ಲಿಕ್ ಸರ್ವಂಟ್‌ಗಳ ಮೇಲೆ ಹಲ್ಲೆಯಾಗಿದೆ. ಇದು ಕಾನೂನಿನ ಮೇಲೆಯಾದ ಹಲ್ಲೆ. ಜನರ ಸೇವೆ ಮಾಡುವ ಅಮೆರಿಕನ್ನರ ಅತ್ಯಂತ ಪವಿತ್ರ ಸಂಸ್ಥೆಯ ಮೇಲೆ ಹಲ್ಲೆ ನಡೆದಿದೆ ಎಂದು ಬೈಡೆನ್ ಹೇಳಿದರು.

ಕ್ಯಾಪಿಟಲ್‌ನಲ್ಲಿ ಕಾಣಿಸುತ್ತಿರುವ ದೃಶ್ಯವು ಅಮೆರಿಕವನ್ನು ಪ್ರತಿಬಿಂಬಿಸುವುದಿಲ್ಲ. ಇದಕ್ಕಾಗಿ ಅಮೆರಿಕ ಹೆಸರುವಾಸಿಯಾಗಿಲ್ಲ. ಉಗ್ರವಾದಿಗಳ ಗುಂಪು ಹಿಂಸಾಚಾರದ ಮೂಲಕ ಅರಾಜಕತೆ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ದೇಶದ್ರೋಹವಾಗಿದ್ದು, ಈ ಹಿಂಸಾಚಾರ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದರು.

ಅಮೆರಿಕ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದರು. ಇದರಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಪ್ರಮಾಣವಚನವನ್ನು ಪಾಲಿಸಿ, ಸಂವಿಧಾನವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂಸಾಚಾರವನ್ನು ಕೊನೆಗೊಳಿಸುವಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡುವಂತೆ ಜೋ ಬೈಡೆನ್ ಆಗ್ರಹಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *