ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಹೋಗುವುದಿಲ್ಲ: ಟ್ರಂಪ್
ವಾಷಿಂಗ್ ಟನ್: ನೂತನ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರದ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅಮೆರಿಕನ್ ಸಂಸತ್ ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ವಿರೋಧಿಸಿ ನಡೆಸಿದ ಗಲಭೆ ವಿಶ್ವಾದ್ಯಂತ ಸುದ್ದಿಯಾಗಿತ್ತು. ಈಗ ಜೋ ಬೈಡನ್ ಪದಗ್ರಹಣ ಸಮಾರಂಭಕ್ಕೆ ಟ್ರಂಪ್ ಗೈರಾಗಲು ನಿರ್ಧರಿಸಿದ್ದಾರೆ.
ಜ.20 ರಂದು ಅಮೆರಿಕದ 46 ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದು, ಶ್ವೇತ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಟ್ವೀಟ್ ಮಾಡಿ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
“ನಾನು ಜ.20 ರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು” ಟ್ರಂಪ್ ಹೇಳಿದ್ದಾರೆ. ಆದರೆ ಶ್ವೇತ ಭವನದಲ್ಲಿ ತಮ್ಮ ಅಧಿಕಾರಾವಧಿಯ ಕೊನೆಯ ಕ್ಷಣಗಳನ್ನು ಹೇಗೆ ಕಳೆಯಲಿದ್ದಾರೆ ಎಂಬ ಬಗ್ಗೆಯೂ ಟ್ರಂಪ್ ಮಾಹಿತಿ ನೀಡಿಲ್ಲ.
ಈ ನಡುವೆ ಕ್ಯಾಪಿಟಲ್ ನಲ್ಲಿ ತಮ್ಮ ಬೆಂಬಲಿಗರು ನಡೆಸಿದ ಗಲೆಭೆಯನ್ನು ಟ್ರಂಪ್ ಖಂಡಿಸಿದ್ದು, ಗಲಭೆಕೋರರು ಅಮೆರಿಕವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ ಜೋ ಬೈಡನ್ ಅವರಿಗೆ ಸೌಹಾರ್ದಯುತ ಅಧಿಕಾರ ಹಸ್ತಾಂತರವನ್ನು ಮಾಡುವುದಾಗಿ ಹೇಳಿದ್ದಾರೆ.
ಗಲಭೆ ಕುರಿತ ವಿಡಿಯೋ ಸಂದೇಶ ನೀಡಿರುವ ಟ್ರಂಪ್ ಅಮೆರಿಕ ಎಂದಿಗೂ ಕಾನೂನು ಮತ್ತು ಸುವ್ಯವಸ್ಥೆಯ ದೇಶವಾಗಿರಬೇಕು ಎಂದು ಕರೆ ನೀಡಿದ್ದಾರೆ.