ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್: ಕ್ಯಾಪಿಟಲ್ ಹಿಂಸಾಚಾರಕ್ಕೆ ಖಂಡನೆ; ಸುಗಮ ಅಧಿಕಾರ ಹಸ್ತಾಂತರದ ಭರವಸೆ
ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಆಕ್ರೋಶ ಮುಗಿಲು ಮುಟ್ಟಿದ್ದು, ಇದರ ನಡುವೆಯೇ ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್ ಸುಗುಮ ಅಧಿಕಾರ ಹಸ್ತಾಂತರದ ಭರವಸೆ ನೀಡಿದ್ದಾರೆ.
ಹೌದು.. ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಟ್ರಂಪ್ ವಿರುದ್ಧ ಅಮೆರಿಕದಾದ್ಯಂತ ಆಕ್ರೋಶ ಮನೆ ಮಾಡುವಂತೆ ಮಾಡಿದ್ದು, ಇದರ ನಡುವೆಯೇ ಟ್ರಂಪ್ ಕೊನೆಗೂ ತಮ್ಮ ಸೋಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಯಾವುದೇ ಕಾರಣಕ್ಕೂ ಶ್ವೇತಭವನ ಬಿಡುವುದಿಲ್ಲ ಎಂದು ಹೇಳುತ್ತಿದ್ದ ಟ್ರಂಪ್ ಇದೀಗ ಸುಗಮವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಟ್ರಂಪ್, ಸುಗಮ, ಕ್ರಮಬದ್ಧ ಹಾಗೂ ತಡೆರಹಿತವಾಗಿ ಅಧಿಕಾರವನ್ನು ಹಸ್ತಾಂತರಿಸುತ್ತೇನೆ. ಅಮೆರಿಕ ಕಾಂಗ್ರೆಸ್ ಚುನಾವಣೆ ಫಲಿತಾಂಶಗಳನ್ನು ಪ್ರಮಾಣೀಕರಿಸಿದೆ. ಹೊಸ ಆಡಳಿತ ಜನವರಿ 20ರಂದು ಉದ್ಘಾಟಿಸಲಾಗುವುದು. ಅಲ್ಲದೆ ಸುಗಮ, ಕ್ರಮಬದ್ಧ ಮತ್ತು ತಡೆರಹಿತ ಅಧಿಕಾರ ಹಸ್ತಾಂತರವನ್ನು ಖಡಿತಪಡಿಸುವುದರತ್ತ ತನ್ನ ಗಮನ ಕೇಂದ್ರಿತವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹಿಂಸಾಚಾರವನ್ನು ಖಂಡಿಸಿರುವ ಡೊನಾಲ್ಡ್ ಟ್ರಂಪ್, ಇದು ಹೇಯ ಕೃತ್ಯ ಎಂದು ಹೇಳಿದರು. ಎಲ್ಲ ಅಮೆರಿಕನ್ನರಂತೆ ನಾನು ಕೂಡಾ ಹಿಂಸಾಚಾರ, ಕಾನೂನುಬಾಹಿರತೆ ಮತ್ತು ಹಾನಿಕರ ಘಟನೆಯಿಂದ ಅಸಮಾಧಾನಗೊಂಡಿದ್ದೇನೆ. ಅಮೆರಿಕ ಕ್ಯಾಪಿಟಲ್ ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗಿದ ಪ್ರತಿಭಟನಕಾರರನ್ನು ಹೊರಹಾಕಲು ತಕ್ಷಣ ನ್ಯಾಷನಲ್ ಗಾರ್ಡ್ ನಿಯೋಜಿಸಿ ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ. ಅಮೆರಿಕ ಯಾವತ್ತೂ ಕಾನೂನು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು ಎಂದು ತಿಳಿಸಿದರು.
ಹಾಗಿದ್ದರೂ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಡೊನಾಲ್ಡ್ ಟ್ರಂಪ್ ಯಾವುದೇ ಮಾತನಾಡಿಲ್ಲ. ನಮ್ಮ ಬೆಂಬಲಿಗರು ನಿರಾಸೆಗೊಂಡಿದ್ದಾರೆ. ನಮ್ಮ ಪ್ರಯಾಣವು ಈಗಷ್ಟೇ ಆರಂಭವಾಗಿದೆ ಎಂಬುದನ್ನು ಅವರಿಗೆ ಹೇಳಲಿಚ್ಛಿಸುತ್ತೇನೆ ಎಂದು ಹೇಳಿದರು.
ಅಮೆರಿಕ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವೆಂಬಂತೆ ಬುಧವಾರ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಸತ್ ಭವನಕ್ಕೆ (ಕ್ಯಾಪಿಟಲ್) ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ್ದರು. ಅಮೆರಿಕ ಸಂಸತ್ನಲ್ಲಿ ಜೋ ಬೈಡನ್ ಗೆಲುವನ್ನು ಪ್ರಮಾಣೀಕರಿಸುವ ವೇಳೆಯಲ್ಲಿ ದಾಳಿ ನಡೆದಿತ್ತು. ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು.