ವಿಧಾನ ಪರಿಷತ್ ಗದ್ದಲ: ಸದನ ಸಮಿತಿಗೆ ವಿಶ್ವನಾಥ್, ಸಂಕನೂರ ರಾಜಿನಾಮೆ
ಬೆಂಗಳೂರು: ಡಿಸೆಂಬರ್ 15ರಂದು ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ರಚಿಸಿದ್ದ ಸದನ ಸಮಿತಿಗೆ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ಮತ್ತು ವಿ.ಎಸ್ ಸಂಕನೂರ ರಾಜಿನಾಮೆ ನೀಡಿದ್ದಾರೆ.
ಜೆಡಿಎಸ್‌ನ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಲಾಗಿತ್ತು. ಶುಕ್ರವಾರ ಮೊದಲ ಸಭೆ ನಡೆಯಿತು. ಈ ಸಭೆಯ ಆರಂಭಕ್ಕೂ ಮೊದಲೇ ಬಿಜೆಪಿ ಸದಸ್ಯರು ‘ಸದನ ಸಮಿತಿ ರಚನೆಯ ವೈಖರಿ ಸರಿ ಇಲ್ಲ. ವಿಶ್ವಾಸವೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿ ಮರಿತಿಬ್ಬೇಗೌಡ ಅವರಿಗೆ ರಾಜೀನಾಮೆ ಸಲ್ಲಿಸಿದರು.
‘ಅಂದು ಗಲಾಟೆ ನಡೆದಾಗ ಈಗ ಸದನ ಸಮಿತಿ ಅಧ್ಯಕ್ಷರಾಗಿರುವ ಮರಿತಿಬ್ಬೇಗೌಡರೂ ಇದ್ದರು. ಹೀಗಾಗಿ, ನಿಷ್ಪಕ್ಷ ತನಿಖೆ ನಡೆಸಲು ಸಾಧ್ಯವೇ’ ಎಂದು ಸುದ್ದಿಗಾರರ ಜತೆ ಮಾತನಾಡಿ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
‘ನಿಯಮಾವಳಿ ಪ್ರಕಾರ ಸದನ ಸಮಿತಿ ರಚನೆಯ ತೀರ್ಮಾನವನ್ನು ಸದನದಲ್ಲೇ ತೆಗೆದುಕೊಳ್ಳಬೇಕು. ಪಕ್ಷಗಳ ಅನುಮತಿ ಪಡೆದ ಬಳಿಕ ಸದಸ್ಯರನ್ನು ಸಮಿತಿಗೆ ಸೇರಿಸಬೇಕು. ಆದರೆ, ಸಭಾಪತಿ ಶಿಷ್ಟಾಚಾರ ಪಾಲಿಸಿಲ್ಲ. ಸಮಿತಿ ಸದಸ್ಯರಲ್ಲಿ ಕೆಲವರು ಗಲಾಟೆಯಲ್ಲಿ ಭಾಗಿಯಾದವರೂ ಇದ್ದಾರೆ. ಅಂತಹವರನ್ನು ಇಟ್ಟುಕೊಂಡು ತನಿಖೆ ನಡೆಸಲು ಸಾಧ್ಯವೆ’ ಎಂದು ಅವರು ಪ್ರಶ್ನಿಸಿದರು.
‘ರಾಜೀನಾಮೆ ನೀಡಬೇಡಿ. ಮೊದಲು ಸಭೆಯಲ್ಲಿ ಕುಳಿತುಕೊಂಡು ಮಾತನಾಡಿ. ಏನೇ ಸಮಸ್ಯೆ ಇದ್ದರೂ ಇತ್ಯರ್ಥ ಮಾಡೋಣ’ ಎಂದು ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರು ವಿಶ್ವನಾಥ್ ಮತ್ತು ಸಂಕನೂರ ಅವರಿಗೆ ಮನವಿ ಮಾಡಿದರು. ಇಬ್ಬರೂ ಮನವಿಗೆ ಸ್ಪಂದಿಸಲಿಲ್ಲ. ಅಂತಿಮವಾಗಿ ಕಾಂಗ್ರೆಸ್ ಸದಸ್ಯರ ಜತೆ ಮರಿತಿಬ್ಬೇಗೌಡ ಸಭೆ ನಡೆಸಿದರು.
ಇದು ನಾವೆಲ್ಲಾ ತಲೆ ತಗ್ಗಿಸುವ ವಿಚಾರ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡಾ ಇದರ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಹೆಚ್. ವಿಶ್ವನಾಥ್ ಒತ್ತಾಯಿಸಿದರು.
ನಿನ್ನೆಯಷ್ಟೇ ಬಿಜೆಪಿಯ ಹಿರಿಯ ಸದಸ್ಯ ಆಯನೂರು ಮಂಜುನಾಥ್ ಅವರು ಸದನ ಸಮಿತಿಯನ್ನು ರಚನೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾಪತಿ ಅವರು ತಮ್ಮ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಪತ್ರ ಬರೆದು ಮನವಿ ಮಾಡಿದ್ದರು.