ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 10 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಂಡಾರ ಆಸ್ಪತ್ರೆ ಅಗ್ನಿ ದುರಂತದಲ್ಲಿ ಆಮೂಲ್ಯ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ. ನಿಜಕ್ಕೂ ಹೃದಯ ಕಲುಕುವ ದುರಂತ ಇದು. ಮಕ್ಕಳ ಪೋಷಕರೊಂದಿಗೆ ನಾವಿದ್ದೇವೆ. ಅವರಿಗೆ ದುಃಖ ತಡೆಯುವ ಶಕ್ತಿಯನ್ನು ದೇವರು ನೀಡಲಿ. ಗಾಯಗೊಂಡ ಮಕ್ಕಳು ಮತ್ತು ಸಿಬ್ಬಂದಿ ಇತರರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆ ಅಗ್ನಿ ದುರಂತದಿಂದಾಗಿ ಆದ ನೋವು ಪದಗಳನ್ನು ಮೀರಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ದೇವರು ನೋವು ತಡೆಯುವ ಧೈರ್ಯ ನೀಡಲಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.