3ನೇ ಟೆಸ್ಟ್: 312 ರನ್ ಗಳಿಗೆ ಆಸ್ಟ್ರೇಲಿಯಾ ಡಿಕ್ಲೇರ್, ಭಾರತಕ್ಕೆ ಗೆಲ್ಲಲು 407 ರನ್ ಗಳ ಬೃಹತ್ ಗುರಿ
ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ನ ನಾಲ್ಕನೇ ದಿನದಾಟದಲ್ಲಿ ಆಸ್ಚ್ರೇಲಿಯಾ ತಂಡ ತನ್ನ 2ನೇ ಇನ್ನಿಂಗ್ಸ್ ಅನ್ನು 312 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಆ ಮೂಲಕ ಭಾರತಕ್ಕೆ ಗೆಲ್ಲಲು 407 ರನ್ ಗಳ ಬೃಹತ್ ಗುರಿ ನೀಡಿದೆ.
3ನೇ ದಿನದಾಟ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ತನ್ನ ರನ್ ಗಳಿಕೆಯನ್ನು 312ಕ್ಕೆ ಏರಿಕೆ ಮಾಡಿಕೊಂಡಿತು. ಮಾರ್ನಸ್ ಲಾಬುಷ್ಚೇಗೆನ್ (73), ಸ್ಟೀವನ್ ಸ್ಮಿತ್ (81), ಕ್ಯಾಮರಾನ್ ಗ್ರೀನ್ (84) ರನ್ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.
ತಂಡ 6 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ್ದಾಗ ಆಸಿಸ್ ನಾಯಕ ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇತ್ತ ಭಾರತದ ಪರ ನವದೀಪ್ ಸೈನಿ 2, ಆರ್.ಅಶ್ವಿನ್ 2, ಬೂಮ್ರಾ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ.