ಇಂಗ್ಲೆಂಡ್ ರಾಣಿ ಎಲಿಜಬೆತ್, ರಾಜ ಫಿಲಿಪ್ ಗೆ ಕೊರೋನಾ ಲಸಿಕೆ!
ಲಂಡನ್: ಬ್ರಿಟನ್ ರಾಣಿ ಎಲಿಜಬೆತ್, ರಾಜ ಫಿಲಿಪ್ ಅವರಿಗೆ ಕೊರೊನಾ ಲಸಿಕೆ ನೀಡಿರುವುದಾಗಿ ಬಕಿಂಗ್ ಹ್ಯಾಮ್ ಅರಮನೆ ಪ್ರಕಟಿಸಿದೆ. ರಾಜ ಫಿಲಿಪ್(99), ಎಲಿಜಬೆತ್ (94) ಅವರಿಗೆ ಕುಟುಂಬ ವೈದ್ಯ ವಿಂಡ್ಸರ್ ಲಸಿಕೆ ಹಾಕಿದರು.
ಲಾಕ್ ಡೌನ್ ಸಮಯದಲ್ಲಿ ಬ್ರಿಟನ್ ರಾಜ, ರಾಣಿ ಇದೇ ಅರಮನೆಯಲ್ಲಿ ನೆಲೆಸಿದ್ದರು. ಮಾರ್ಚ್‌ನಿಂದ ಅಕ್ಟೋಬರ್ ವರೆಗೆ ನಡೆದ ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಈ ದಂಪತಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ ರಾಜ ದಂಪತಿಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು.
ರಾಜದಂಪತಿಯ ಮೊಮ್ಮಗ ವಿಲಿಯಮ್ಸ್ ಅವರಿಗೂ ಕೂಡಾ ಕಳೆದ ಏಪ್ರಿಲ್ ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ, ಈ ಕುರಿತು ಅಧಿಕೃತ ಹೇಳಿಕೆ ನೀಡಿರಲಿಲ್ಲ ಎಂದು ಬಿಬಿಸಿ ವರದಿಮಾಡಿದೆ. ರಾಜ, ರಾಣಿ ಕ್ರಿಸ್‌ಮಸ್ ಹಬ್ಬವನ್ನು ಬರ್ಕ್‌ಷೈರ್ ರೆಸಿಡೆನ್ಸಿಯಲ್ಲಿ ಆಚರಿಸಿಕೊಂಡಿದ್ದರು. ಕೊರೊನಾ ಸಾಂಕ್ರಾಮಿಕ ನಂತರ ಮೊದಲ ಬಾರಿಗೆ ಕಳೆದ ತಿಂಗಳು ರಾಣಿ ಎಲಿಜಬತ್ ರಾಜ ಕುಟುಂಬದ ಹಿರಿಯ ಸದಸ್ಯರನ್ನು ಭೇಟಿಯಾಗಿದ್ದರು.
ಬ್ರಿಟನ್‌ನಲ್ಲಿ ಈವರೆಗೆ 1.5 ದಶಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಲಾಗುತ್ತಿದೆ. ಬ್ರಿಟನ್ ನಲ್ಲಿ ಈವರೆಗೆ ಮೂರು ಸಂಸ್ಥೆಗಳ ಕೋವಿಡ್ ಲಸಿಕೆಗಳು ಲಭ್ಯವಿದೆ. ಇವುಗಳಲ್ಲಿ ಫೈಝರ್- ಬಯೋಟೆಕ್, ಆಕ್ಸ್‌ಫರ್ಡ್-ಆಸ್ಟ್ರೊಜೆನಿಕಾ, ಮಾಡರ್ನಾ ಲಸಿಕೆಗಳು ಸೇರಿವೆ.