ಕೊರೋನಾ ಲಸಿಕೆ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಇಂದು ಪ್ರಧಾನಿ ಮೋದಿ ಸಭೆ
ನವದೆಹಲಿ: ಕೋವಿಡ್ ಲಸಿಕೆ ಹಂಚಿಕೆಗೆ ಜ.16ಕ್ಕೆ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸೋಮವಾರ ಸಿದ್ಧತಾ ಸಬೆ ನಡೆಸಲಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರೂ ಕೂಡ ಭಾಗಿಯಾಗಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕೋವಿಡ್ ಲಸಿಕೆ ವಿತರಣೆಯ ಬಗ್ಗೆ ಕೈಗೊಂಡಿರುವ ಕ್ರಮಗಳು, ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ವಿವರಿಸಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸಭೆ ವೇಳೆ ಮೋದಿಯವರು ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ಇದೇ ವೇಳೆ ರಾಜ್ಯಗಳಿಗೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಭಾರತದಲ್ಲಿ ಪುಣೆಯ ಸೀರಂ ಇನ್ಸ್ ಟಿಟ್ಯೂಟ್’ನ ಆಕ್ಸ್ ಫರ್ಡ್ ಕೋವಿಶೀಲ್ಡ್ ಲಸಿಕೆ ಹಾಗೂ ಹೈದರಾಬಾದ್ ಭಾರತ್ ಬಯೋಟೆಕ್’ನ ಕೋವ್ಯಾಕ್ಸಿನ್ ಲಸಿಕೆಗಳು ತುರ್ತು ಬಳಕೆಗಾಗಿ ಅನುಮೋದನೆ ಪಡೆದಿವೆ.
ಮೊದಲ ಹಂತದಲ್ಲಿ ಕೊರೋನಾ ವಿರುದ್ಧ ಹೋರಾಡಿರುವ 3 ವೈದ್ಯಕೀ ಸಿಬ್ಬಂದಿ, ಇತರೆ ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ.
ಕೊರೋನಾ ನಿಯಂತ್ರಿಣದ ಬಗ್ಗೆ ಈಗಾಗಲೇ ಹಲವು ಸುತ್ತಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಮೋದಿಯವರು ಸಬೆ ನಡೆಸಿದ್ದರು. ಈ ಹಿಂದಿನದ್ದೆಲ್ಲಾ ಲಸಿಕೆಗೆ ಅನುಮತಿ ನೀಡುವ ಮುನ್ನಾ ನಡೆದ ಸಭೆಗಳಾಗಿವೆ. ಆದರೆ, ಪ್ರಸ್ತುತ ಇಂದು ನಡೆಯುತ್ತಿರುವ ಸಭೆಯು 2 ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕ ಬಳಿಕದ ಮೊದಲ ಸಭೆಯಾಗಿದೆ. ಹೀಗಾಗಿಯೇ ಈ ಸಭೆ ಸಾಕಷ್ಟು ಮಹತ್ವದ್ದಾಗಿದೆ.