ಶತಕದಂಚಿನಲ್ಲಿ ಎಡವಿದ ಪಂತ್, ಆದರೂ ದಾಖಲೆ ನಿರ್ಮಾಣ
ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಶತಕದಂಚಿನಲ್ಲಿ ಎಡವಿ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿದ್ದಾರೆ.
ಹೌದು.. ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹಾಲಿ ಪಂದ್ಯದಲ್ಲಿ ಭಾರತದ ಗೆಲುವಿನ ಆಸೆ ಚಿಗುರೊಡೆಸಿರುವ ರಿಷಬ್ ಪಂತ್ 97 ರನ್ ಗಳಿಸಿ ಕೇವಲ 3 ರನ್ ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ತಮಗೆ ಸಿಕ್ಕ 2 ಅಮೂಲ್ಯ ಜೀವದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡ ಪಂತ್ ಪೂಜಾರ ಜೊತೆಗೂಡಿ ದೊಡ್ಡ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಬರೊಬ್ಬರಿ 148ರನ್ ಗಳ ಜೊತೆಯಾಟವಾಡಿತು.
ಆದರೆ ಈ ಹಂತದಲ್ಲಿ ದಾಳಿಗಿಳಿದ ಲೈಯಾನ್ ಪಂತ್ ರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಲೈಯಾನ್ ಎಸೆದ ಎಸೆತವನ್ನು ತಪ್ಪಾಗಿ ಆರ್ಥೈಸಿಕೊಂಡ ಪಂತ್, ಬ್ಯಾಕ್ ವರ್ಡ ಪಾಯಿಂಚ್ ನತ್ತ ಬಲವಾಗಿ ಬಾರಿಸಿದರು. ಆದರೆ ಅಲ್ಲಿಯೇ ನಿಂತಿದ್ದ ಪ್ಯಾಟ್ ಕಮಿನ್ಸ್ ಯಶಸ್ವಿಯಾಗಿ ಕ್ಯಾಚ್ ಹಿಡಿದರು. ಆ ಮೂಲಕ ಪಂತ್ ಕೇವಲ 3 ರನ್ ಗಳ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
ಶತಕ ಮಿಸ್ ಆದರೂ ದಾಖಲೆ ಬರೆದ ಪಂತ್
ಇನ್ನು ಈ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡರೂ ಪಂತ್ ಭಾರತದ ಪರ ಮಹತ್ವದ ದಾಖಲೆ ಬರೆದಿದ್ದಾರೆ. ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್ ನಲ್ಲಿ 2ನೇ ಗರಿಷ್ಠ ರನ್ ಭಾರಿಸಿದ ಭಾರತ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಂತ್ ಭಾಜನರಾಗಿದ್ದಾರೆ. ಈ ಹಿಂದೆ 2018ರಲ್ಲಿ ಇದೇ ಪಂತ್ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ 114ರನ್ ಸಿಡಿಸಿದ್ದರು. ಇದು ಭಾರತ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳಿಸಿದ ಗರಿಷ್ಛ ರನ್ ಗಳಿಕೆಯಾಗಿದೆ. 2007ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಧೋನಿ ಅಜೇಯ 76 ರನ್ ಗಳಿಸಿದ್ದರು. ಇದು ಮೂರನೇ ಗರಿಷ್ಛ ರನ್ ಗಳಿಕೆಯಾಗಿದೆ.