ಸಂಕ್ರಾಂತಿ ಮುನ್ನಾ ದಿನ ಸಂಪುಟ ವಿಸ್ತರಣೆ ಫಿಕ್ಸ್..! ಬುಧವಾರವೇ ನಡೆಯುತ್ತೆ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ…!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಭೇಟಿ ಯಶಸ್ವಿಯಾಗಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ದೂರವಾಣಿ ಕರೆ ಬಂದಿದೆ. ಜನವರಿ 13 ರಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿಯಾಗಿದೆ.
ನಾಯಕತ್ವ ಬದಲಾವಣೆ ಸೇರಿ ಎಲ್ಲಾ ರೀತಿಯ ಉಹಾಪೋಹಗಳಿಗೆ ವರಿಷ್ಟರು ತೆರೆ ಎಳೆದಿದ್ದು ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಇದೇ 13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾತ್ರಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಶಾಸಕರಾದ ಮುನಿರತ್ನ, ಎಂಟಿಬಿ ನಾಗರಾಜ್, ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ಗ್ಯಾರಂಟಿಯಾಗಿದೆ. ಇವರೊಂದಿಗೆ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸುನಿಲ್ ಕುಮಾರ್ ಮತ್ತು ತಿಪ್ಪಾರೆಡ್ಡಿ ಹಾಗೂ ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಸಂಪುಟ ಪುನಾರಚನೆಯಾದಲ್ಲಿ ಹಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಸಿಗಲಿದೆ. ಖಾತೆಗಳಲ್ಲಿಯೂ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ಪಕ್ಷಕ್ಕೆ ವಲಸೆ ಬಂದವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಖಚಿತ. ಪಟ್ಟಿಯಲ್ಲಿರುವ ಕೆಲವರ ಹೆಸರು ಕೈ ಬಿಡಬಹುದು ಅಂತಿಮವಾಗಿ ಸೋಮವಾರ ಸಂಜೆ ಸ್ಪಷ್ಟಣೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.