ಹೊಸಬರಿಗೋ, ಪಕ್ಷ ನಿಷ್ಠರಿಗೋ: ಸಂಪುಟ ವಿಸ್ತರಣೆಯಲ್ಲಿ ಸಿಎಂ ಗೆ ‘ಸಮತೋಲನ’ ಸಂಕಷ್ಟ!
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಪಕ್ಷ ನಿಷ್ಠ ಶಾಸಕರು ಮತ್ತು ಹೊಸಬರನ್ನು ವಿಶ್ವಾಸಕ್ಕೆ ತೆಗೆದುಕೊಂದು ಮುಂದುವರಿಯಲು ಯತ್ನಿಸುತ್ತಿದ್ದಾರೆ.
ಎನ್. ಮುನಿರತ್ನ, ಎಂಟಿಬಿ ನಾಗರಾಜ್, ಹಾಗೂ ಆರ್. ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ನಾಲ್ಕು ಸ್ಥಾನಗಳಿಗೆ ಹಿರಿಯ ನಾಯಕರನ್ನು ಸೇರಿಸಿಕೊಳ್ಳಲು ಚಿಂತಿಸಲಾಗುತ್ತಿದೆ.
ಜನವರಿ 13 ಅಥವಾ 14 ರಂದು ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ, ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಮ್ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಮಂಗಳವಾರ ಸಂಂಜೆ ಹೊತ್ತಿಗೆ ಸಂಪುಟಕ್ಕೆ ಸೇರುವವರ ಪಟ್ಟಿ ಸ್ಪಷ್ಟವಾಗಲಿದೆ.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಇನ್ನೂ ಸುಳಿವು ನೀಡಿಲ್ಲ, ಸದ್ಯ 27 ಸಚಿವರಿದ್ದು, 7 ಸ್ಥಾನಗಳು ಖಾಲಿಯಿವೆ.
7 ಸಚಿವ ಸ್ಥಾನಗಳನ್ನು ಭರ್ತಿ ಮಾಡುಲು ಮುಂದಾಗಿರುವ ಯಡಿಯೂರಪ್ಪ ಒಂದಿಬ್ಬರು ಸಚಿವರಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸಮೀಪಿಸುತ್ತಿದೆ. ಇನ್ನು ಕಳೆದ ಉಪ ಚುನಾವಣೆ ವೇಳೆ ಮುನಿರತ್ನ ಅವರನ್ನು ಸಚಿವರನ್ನಾಗಿಸುವುದಾಗಿ ಪ್ರಚಾರದ ವೇಳೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಎಂಟಿಬಿ ನಾಗರಾಜ್, ಆರ್ ಶಂಕರ್ ಹಾಗೂ ಸಿಪಿ ಯೋಗೇಶ್ವರ್ ಮತ್ತು ಉಮೇಶ್ ಕತ್ತಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹಲವರು ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎ.ಎಚ್ ವಿಶ್ವನಾಥ್ ಅವರನ್ನು ಸಂಪುಟ ವಿಸ್ತರಣೆಗೆ ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ರಾಜು ಗೌಡ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ಆಚಾರ್ ಮತ್ತು ಗೌಡ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಉತ್ಸುಕರಾಗಿದ್ದರೇ ಉಮೇಶ್ ಕತ್ತಿ ಮತ್ತು ಲಿಂಬಾವಳಿ ಅವರನ್ನು ಸೇರಿಸಿಕೊಳ್ಳುವಂತೆ ಹೈಕಮಾಂಡ್ ಶಿಪಾರಸ್ಸು ಮಾಡಿದೆ. ಅಬಕಾರಿ ಸಚಿವ ಎಚ್. ನಾಗೇಶ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸಂಪುಟದಿಂದ ಕೈ ಬಿಡಲು ಉದ್ದೇಶಿಸಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ, ಆದರೆ ತಮ್ಮನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾಗಿ ಎಚ್ ನಾಗೇಶ್ ತಿಳಿಸಿದ್ದಾರೆ.